ಬೆಂಗಳೂರು, ಮಾ. 10 (Daijiworld News/MB) : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ಭಾರತದಲ್ಲೂ ಹಬ್ಬುತ್ತಲ್ಲಿದ್ದು ಈ ಹಿನ್ನಲೆಯಲ್ಲಿ ಜನರಲ್ಲಿ ಈ ಕುರಿತು ಆರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಯಾರಿಗಾದರೂ ದೂರವಾಣಿ ಕರೆ ಮಾಡಿದ್ದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕುರಿತಾದ ಸಂದೇಶ ಕೇಳಿ ಬರುತ್ತದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್, "ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ" ಹಾಕಿದಂತಾಗಿದೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ದೂರವಾಣಿ ಕರೆಗಳ ಆರಂಭದಲ್ಲಿ ನೀಡುತ್ತಿರುವ ಕರೋನಾ ಕುರಿತ ಮುನ್ನೆಚ್ಚರಿಕೆ ಸಂದೇಶ ಎಂದು ಹೇಳಿದ್ದಾರೆ.
ದೇಶದ ಜನ ಇದರಿಂದ ತಲ್ಲಣಿಸಿ ಹೋಗಿದ್ದಾರೆ. ಹಣ್ಣು, ತರಕಾರಿಯಿಂದ ಹಿಡಿದು ಷೇರುಗಳವರೆಗೆ ಸರ್ವಮಾರುಕಟ್ಟೆಯೂ ಪಾತಾಳಕ್ಕೆ ಕುಸಿದಿದೆ ಎಂದು ಸಿಡಿಮಿಡಿಗೊಂಡಿದ್ದಾರೆ.
ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸಮಸ್ಯೆ ಇರುವೆಡೆ ಕ್ರಮ ಕೈಗೊಳ್ಳಬೇಕೇ ಹೊರತು ಈ ರೀತಿ ಸಾಮೂಹಿಕವಾಗಿ ಜನರನ್ನು ಹೆದರಿಸುವುದು ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈಗಾಗಲೇ 47 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರಿನಲ್ಲೂ ಒಂದು ಪ್ರಕರಣ ದೃಢಪಟ್ಟಿದೆ.