ನವದೆಹಲಿ, ಮಾ 10 (Daijiworld News/MSP): ಕೊರೊನಾ ಪೀಡಿತ ಇರಾನ್ ನಿಂದ ಮೊದಲ ಹಂತದಲ್ಲಿ 58 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ಮಿಲಿಟರಿ ಸಾಮಗ್ರಿಗಳ ಸಾಗಾಟ ವಿಮಾನದಲ್ಲಿ ಹೊತ್ತುತಂದಿದೆ.
ಐಎಎಫ್ ಸಿ -17 ಗ್ಲೋಬ್ಮಾಸ್ಟರ್ ವಿಮಾನವನ್ನು ಭಾರತೀಯರ ರಕ್ಷಣೆಗಾಗಿ ಇರಾನ್ ಗೆ ನಿನ್ನೆ ಸಂಜೆ ಕಳುಹಿಸಿಕೊಡಲಾಗಿತ್ತು. ಇರಾನ್ ನಲ್ಲಿ ಸುಮಾರು 2 ಸಾವಿರ ಮಂದಿ ಭಾರತೀಯರು ನೆಲೆಸಿದ್ದಾರೆ. ಇರಾನ್ ನಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಇರಾನ್ ನಲ್ಲಿದ್ದ ಭಾರತೀಯರನ್ನು ರಕ್ಷಿಸುಲು ಕೇಂದ್ರ ಸರ್ಕಾರ ಮುಂದಾಗಿತ್ತು.
ಭಾರತೀಯ ಮೊದಲ ಬ್ಯಾಚ್ ಇರಾನ್ನ ಟೆಹ್ರಾನ್ನಿಂದ ಗಾಜಿಯಾಬಾದ್ನ ಹಿಂದೊನ್ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದಿದೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಹಿಂದೊನ್ ವಾಯುನೆಲೆಯಲ್ಲಿ ವಿಮಾನ ಬಂದಿಳಿದಿದ್ದು ಅಲ್ಲಿಂದ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗುತ್ತದೆ.