ಬೆಂಗಳೂರು, ಮಾ 10 (Daijiworld News/MSP): ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಸರಕಾರದ 18 ಶಾಸಕರು ಬೆಂಗಳೂರಿನ ಹೋಟೇಲ್ ನಲ್ಲಿ ತಂಗಿದ್ದಾರೆ. ಸೋಮವಾರ ತಡರಾತ್ರಿಯ ಬೆಳವಣಿಗೆಯಲ್ಲಿ ಕಮಲ್ ನಾಥ್ ಸಂಪುಟದ 16 ಮಂದಿ ಸಚಿವರು ರಾಜೀನಾಮೆ ನೀಡಿ ಸರಕಾರ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಉರುಳುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಸರಕಾರದ 18 ಶಾಸಕರು ಬೆಂಗಳೂರಿನ ರೆಸಾರ್ಟ್ನಲ್ಲಿಟ್ಟಿದ್ದಾರೆ ಎಂದು ಸುದ್ದಿಯಾಗುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೇಗಾದರೂ ಮಾಡಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉಳಿಸಲೇ ಬೇಕು ಎನ್ನುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ
ಈ ಕುರಿತು ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, "ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಹೀಗಾಗಿ ಇದರಲ್ಲಿ ಬಿಜೆಪಿ ನಾಯಕರು ಮೂಗುತೂರಿಸುವ ಅಥವಾ ನಮ್ಮ ಶಾಸಕರಿಗೆ ರಕ್ಷಣೆ ನೀಡುವ ಅಗತ್ಯವಿಲ್ಲ. ನಮ್ಮ ಶಾಸಕರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಡುವುದಿಲ್ಲ ಎಂದಿದ್ದಾರೆ. ಶೀಘ್ರದಲ್ಲೇ ನಮ್ಮ ಅಸಮಾಧಾನಿತ ಶಾಸಕರನ್ನು ಸಂಪರ್ಕಿಸಿ ಮಾತನಾಡಿಸಲಾಗುವುದು ಮತ್ತು ಅವರ ಮನವೊಲಿಸಿ ಮತ್ತೆ ಪಕ್ಷಕ್ಕೆ ಕರೆತರಲಾಗುವುದು" ಎಂದು ತಿಳಿಸಿದ್ದಾರೆ.
ಈ ಹಿಂದೆ ಗುಜರಾತ್ನಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಸೋಲಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿತ್ತು. ಆದರೆ, ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಕರ್ನಾಟಕದ ರೆಸಾರ್ಟ್ನಲ್ಲಿ ಭದ್ರವಾಗಿಡುವ ಮೂಲಕ ಡಿಕೆಶಿ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದ ಡಿಕೆಶಿ ಜಯ ಸಾಧಿಸಿದ್ದರು. ಇದೇ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಜವಾಬ್ದಾರಿಯನ್ನೂ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದೆ ಎನ್ನಲಾಗುತ್ತಿದೆ.