ನವದೆಹಲಿ, ಮಾ. 10 (Daijiworld News/MB) : ಮಧ್ಯಪ್ರದೇಶ ಸರ್ಕಾರದ ವಿರುದ್ಧ ನಿಂತಿರುವ ಕಾಂಗ್ರೆಸ್ನ ಹಿರಿಯ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಮೊದಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಅವರು ಬಳಿಕ ಅವರ ಜೊತೆಯಲ್ಲಿಯೇ ಮೋದಿಯನ್ನು ಭೇಟಿಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಬಿಕ್ಕಟ್ಟು ಕಂಡು ಬಂದಿರುವ ನಡುವೆಯೇ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೇ ಮಧ್ಯಪ್ರದೇಶ ಸರ್ಕಾರ ಉಳಿಯುತ್ತದೋ ಎನ್ನುವ ಅನುಮಾನ ಉಂಟಾಗಿದೆ.
ಕಾಂಗ್ರೆಸ್ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಜಯ ಕಂಡಾಗಲೇ ಜೋತಿರಾದಿತ್ಯ ಸಿಂಧಿಯಾ ಅವರು ಮುಖ್ಯಮಂತ್ರಿಯಾಗುವ ಬಯಕೆಯಲ್ಲಿದ್ದರು. ಆದರೆ ಹೈಕಮಾಂಡ್ ಹಿರಿಯ ನಾಯಕ ಕಮಲನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಈ ಕಾರಣದಿಂದಾಗಿ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿದೆ.
ಸೋಮವಾರ ರಾತ್ರಿ ಮಧ್ಯಪ್ರದೇಶದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕಮಲನಾಥ್ ಸಂಪುಟದ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದಾರೆ. ಕಮಲನಾಥ್ ಅವರು ಸಂಪುಟ ಪುನಾರಚನೆಗೆ ತೀರ್ಮಾನ ಮಾಡಿದ್ದು ಜ್ಯೋತಿರಾಧಿತ್ಯ ಸಿಂಧ್ಯ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದ್ದು ಈ ಕಾರಣದಿಂದಾಗಿ ಎಲ್ಲಾ ಸಚಿವರುಗಳಿಂದ ರಾಜೀನಾಮೆ ಪಡೆಯಲಾಗಿದೆ.