ಬೆಂಗಳೂರು, ಮಾ. 10 (Daijiworld News/MB) : ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.
ಮಂಗಳವಾರ ಮಧ್ಯಾಹ್ನ 2.30 ಕ್ಕೆ ವಿಧಾನಸೌಧದ ನಂ. 313 ನೇ ಕೊಠಡಿಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಈ ಸಭೆ ನಡೆಯಲಿದ್ದು ಸಭೆಯಲ್ಲಿ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಸೋಮವಾರ ಮೊದಲ ಪ್ರಕರಣ ದೃಢಪಟ್ಟಿದ್ದು ಮಂಗಳವಾರ ಆರೋಗ್ಯ ಸಚಿವ ಶ್ರೀ ರಾಮುಲು ನಾಲ್ವರಿಗೆ ಕೊರೊನಾ ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.
"ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ" ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ.