ತಿರುವನಂತಪುರಂ, ಮಾ. 10 (Daijiworld News/MB) : ಭಾರತದಲ್ಲಿ ಕೊರೊನಾ ತನ್ನ ಕರಾಳ ಹಸ್ತವನ್ನು ಎಲ್ಲೆಡೆ ಚಾಚುತ್ತಿದ್ದು ಈ ವೈರಸ್ನ ಮೊದಲ ಪ್ರಕರಣ ಪತ್ತೆಯಾದ ಕೇರಳದಲ್ಲಿ 7 ನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚಲು ಹಾಗೂ ಸಾರ್ವಜನಿಕ ಕಾರ್ಯಕ್ರಮ ರದ್ದು ಮಾಡಲು ನಿರ್ಧಾರ ಮಾಡಿದೆ.
ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು ಮಾರ್ಚ್ ಕೊನೆಯವರೆಗೆ ನಡೆಯುವುದಿಲ್ಲ. ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ, ಜನರು ಹಾಗೂ ಎಲ್ಲಾ ಸಂಘಟನೆಗಳು ಒಂದಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ತಿಳಿಸಿದ್ದಾರೆ.
ಹಾಗೆಯೇ ಎಲ್ಲಾ ಟ್ಯುಟೋರಿಯಲ್, ತರಬೇತಿ ಕೇಂದ್ರಗಳು, ಅಂಗನವಾಡಿಗಳು, ಮದ್ರಾಸಗಳಲ್ಲಿ ತರಗತಿ ನಡೆಸದಂತೆ ಕೋರಲಾಗಿದೆ.
ಈ ಸಮಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಈ ಕಾರ್ಯಕ್ರಮಗಳನ್ನು ನಡೆಸಬೇಡಿ ಎಂದು ಸಂಘಟಕರಲ್ಲಿ ಮನವಿ ಮಾಡಲಾಗಿದೆ.
ನಾವು ವಿವಾಹ ಕಾರ್ಯಕ್ರಮಗಳನ್ನು ಮುಂದೂಡುವಂತೆ ಹೇಳುವುದಿಲ್ಲ. ಆದರೆ ವಿವಾಹ ಕಾರ್ಯಕ್ರಮವನ್ನು ಸರಳವಾಗಿ, ಕಡಿಮೆ ಅತಿಥಿಗಳೊಂದಿಗೆ ನಡೆಸಿ ಎಂದು ಹೇಳಿದ್ದಾರೆ.
ಹಾಗೆಯೇ ಶಬರಿಮಲೆಯಲ್ಲಿ ಎಂದಿನಂತೆ ಪೂಜೆಗಳು ನಡೆಯಲಿದೆ. ಆದರೆ ಭಕ್ತರು ದೇವಾಲಯಗಳ ಭೇಟಿಯನ್ನು ಆದಷ್ಟು ಮಾಡದಿರುವುದು ಉತ್ತಮ ಎಂದು ಹೇಳಿದ್ದಾರೆ.
ಕೇರಳದಲ್ಲಿ ಈವರೆಗೆ 12 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಭಾರತದಲ್ಲಿ ಈವರೆಗೆ 45 ಕೊರೊನಾ ಪ್ರಕರಣಗಳು ದೃಢಪಟ್ಟಿದೆ.