ಮೈಸೂರು, ಮಾ. 10 (Daijiworld News/MB) : ಧರ್ಮಗಳ ನಡುವೆ ಗಲಭೆ ಸೃಷ್ಟಿ ಮಾಡುವಂತಹ ಹೇಳಿಕೆ ನೀಡಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಮುಖಂಡ ಅಡಗೂರು ಎಚ್.ವಿಶ್ವನಾಥ್ ಆಗ್ರಹ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೇವಲ ರಮೇಶ್ಕುಮಾರ್ ಮಾತ್ರವಲ್ಲ, ಸಂವಿಧಾನ ಬಾಹಿರವಾಗಿ ಮಾತನಾಡುವ ಎಲ್ಲರ ಮೇಲೂ ಪಕ್ಷಾತೀತವಾಗಿ ಪ್ರಕರಣ ದಾಖಲಿಸಬೇಕು" ಎಂದು ಹೇಳಿದ್ದಾರೆ.
ಸ್ಪೀಕರ್ ಆಗಿದ್ದ ರಮೇಶ್ಕುಮಾರ್ ಮುಸ್ಲಿಮರೆಲ್ಲ ಒಂದಾಗಿ ಪ್ರಧಾನಮಂತ್ರಿ ಅವರನ್ನು ಒದ್ದು ದೇಶದ ಹೊರಗೆ ಹಾಕಿ ಎಂದು ಹೇಳಿದ್ದಾರೆ. ಇವರೊಬ್ಬ ಮಾನಸಿಕ ಅಸ್ವಸ್ಥ. "ಯಶಸ್ವಿನಿ"ಯನ್ನು ತೆಗೆದು ಹಾಕುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಿತ್ತುಕೊಂಡವರು. ಮೊದಲು ಇವರನ್ನು ಒದ್ದು ಜೈಲಿಗೆ ಹಾಕಬೇಕು ಎಂದು ಗಡುಗಿದ್ದಾರೆ.
ನಾನೂ ಶಾದಿಭಾಗ್ಯ ಬೇಕು ಎಂದು ಒತ್ತಾಯಿಸುತ್ತೇನೆ. ಆದರೆ ಮುಸ್ಲಿಮರ ಪರವಾಗಿ ಬೂಟಾಟಿಕೆ ಮಾತನ್ನು ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಆಡುತ್ತಿದ್ದಾರೆ. ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಅಥವಾ ಅಧ್ಯಕ್ಷ ಸ್ಥಾನಗಳಲ್ಲಿ ಒಂದಾದರೂ ಮುಸ್ಲಿಮರಿಗೆ ನೀಡುವಂತೆ ಸಿದ್ದರಾಮಯ್ಯ ಪ್ರತಿಪಾದಿಸಲಿ" ಎಂದು ಸವಾಲೆಸೆದು ಸಿದ್ದರಾಮಯ್ಯ ಅವರು ರೋಷನ್ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಮುಸ್ಲಿಂ ನಾಯಕತ್ವವನ್ನೇ ಹತ್ಯೆ ಮಾಡಿದ್ದಾರೆ ಎಂದು ಟೀಕೆ ಮಾಡಿದರು.
ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳುವ ಎಚ್.ಡಿ.ದೇವೇಗೌಡ, ತಮ್ಮ ಪಕ್ಷದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಲಿ. ಮುಸ್ಲಿಮರ ಕೇರಿಗೆ ಹೋಗಿ ಕಣ್ಣೀರು ಹಾಕುವುದನ್ನು ಅವರು ಬಿಡಬೇಕು ಎಂದರು.
ಶ್ರೀರಾಮುಲು ದುಬಾರಿ ವಿವಾಹ ಮಾಡುತ್ತಿರುವುದು ಹಾಗೂ ಚ್.ಡಿ.ಕುಮಾರಸ್ವಾಮಿ ದುಬಾರಿ ವಿವಾಹ ಮಾಡುತ್ತಿರುವುದು ಸರಿಯಲ್ಲ. ಶಾಸಕ ಜಿ.ಟಿ.ದೇವೇಗೌಡ, ನಾನು, ಕಾಂಗ್ರೆಸ್ ಮುಖಂಡ ಆಂಜನೇಯ ತಮ್ಮ ತಮ್ಮ ಮಕ್ಕಳ ವಿವಾಹವನ್ನು ಸರಳವಾಗಿ ಮಾಡಿ ಆದರ್ಶ ಮೆರೆದಿದ್ದೇವೆ ಎಂದು ಹೇಳಿದರು.
ಎಚ್.ಎಸ್.ದೊರೆಸ್ವಾಮಿ ಅವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಹಾಗೆಯೇ, ಬಸವನಗೌಡ ಯತ್ನಾಳ್ ಸಹ ದೊರೆಸ್ವಾಮಿ ಕುರಿತು ಗೌರವಯುತವಾಗಿ ಮಾತನಾಡಬೇಕು ಎಂದರು.