ಮುಂಬೈ, ಮಾ. 10 (Daijiworld News/MB) : ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿತರಾಗಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ಈ ಹಿಂದೆ ಪ್ರಿಯಾಂಕಾ ಗಾಂಧಿ ಅವರಿಂದ ಪಡೆದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪೇಂಟಿಂಗ್ನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ರಾಜೀವ್ ಗಾಂಧಿ ಅವರ ಪೇಂಟಿಂಗ್ನ್ನು ಪ್ರಖ್ಯಾತ ಕಲಾವಿದ ಎಂಎಫ್ ಹುಸೇನ್ ರಚಿಸಿದ್ದು ಪ್ರಿಯಾಂಕಾ ಗಾಂಧಿ ಅವರಿಂದ ರಾಣಾ ಕಪೂರ್ ಎರಡು ಕೋಟಿ ರೂ.ಗಳಿಗೆ ಖರೀದಿ ಮಾಡಿದ್ದರು.
ಈ ವಿಚಾರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ರಾಣಾ ಕಪೂರ್ ಅವರ ನಿವಾಸದಲ್ಲಿದ್ದ ಈ ಪೇಂಟಿಂಗ್ನ್ನು ವಶಕ್ಕೆ ಪಡೆದಿದ್ದಾರೆ.
ವರ್ಣ ಚಿತ್ರ ಖರೀದಿ ಸಂಬಂಧ ಜೂನ್ 3, 2010 ರಂದು ಎಚ್ಎಸ್ಬಿಸಿ ಬ್ಯಾಂಕ್ ಖಾತೆಯಿಂದ 2 ಕೋಟಿ ರೂ.ಗಳ ಚೆಕ್ ಪಾವತಿಗೆ ಸಂಬಂಧಿಸಿದ ರಸೀದಿಯ ವಿವರಗಳನ್ನು ಪ್ರಿಯಾಂಕಾ ಗಾಂಧಿ ಅವರು ರಾಣಾ ಕಪೂರ್ ಅವರಿಗೆ ಬರೆದಿದ್ದ ಧನ್ಯವಾದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ರಾಣಾ ಕಪೂರ್ ಪೇಂಟಿಂಗ್ ಖರೀದಿಸಿದ್ದರ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರೆದಿದ್ದು, ಸಮಗ್ರ ತನಿಖೆಯ ಬಳಿಕ ಕಾಂಗ್ರೆಸ್ ಅಸಲಿ ಬಣ್ಣ ಬಯಲಾಗಲಿದೆ ಎಂದು ಬಿಜೆಪಿ ಹೇಳಿದ್ದು ಹೌದು ಸಮಗ್ರ ತನಿಖೆ ಬಳಿಕ ಬಿಜೆಪಿ ಅಸಲಿ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ.