ಬೆಂಗಳೂರು, ಮಾ 10 (DaijiworldNews/SM): ಮಾಹಾಮಾರಿ ಕೊರೋನಾ ತೀವ್ರಗೊಳ್ಳುತ್ತಿದ್ದು, ರಾಜ್ಯದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಕ್ರಮಕೈಗೊಳ್ಳಲಾಗಿದ್ದು, ಸಮಿತಿ ರಚಿಸಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೋನಾ ಸಂಬಂಧಿಸಿದಂತೆ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಕೆಲವು ದಿನಗಳಿಂದ ಹಲವು ದೇಶಗಳನ್ನು ಬಾಧಿಸಿರುವ ಕೊರೋನಾ ವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ.
ಈ ನಡುವೆ ಕರ್ನಾಟಕದಲ್ಲಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರ ತಡೆಗೆ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಸಭೆ ನಡೆಸಿ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ರಾಜ್ಯದಲ್ಲಿ ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸರಕಾರ ಬದ್ಧ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈವರೆಗೆ ಕರೋನಾ ವೈರಸ್ ಸೋಂಕು ಇರುವ ದೇಶಗಳಿಂದ ಪ್ರಯಾಣಿಸಿರುವ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ 1048 ಜನರನ್ನು ಅವಲೋಕನೆಗಾಗಿ ಗುರುತಿಸಲಾಗಿದೆ. ಈ ವರೆಗೆ ರೋಗ ಲಕ್ಷಣ ಇರುವ 446 ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ. 389 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದ್ದು, 4 ಮಾದರಿಗಳು ಪಾಸಿಟಿವ್ ಎಂದು ತಿಳಿದುಬಂದಿದೆ. ಉಳಿದ ಮಾದರಿಗಳ ವರದಿಗಳು ಇನ್ನಷ್ಟೇ ಕೈ ಸೇರಬೇಕಿದೆ. ಸೋಕು ತಗುಲಿದವರಿಗೆ ಪ್ರತ್ಯೇಕವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.