ಬೆಂಗಳೂರು, ಮಾ. 11 (Daijiworld News/MB) : ಶಿಕ್ಷಕರ ವರ್ಗಾವಣೆ ಸಂಬಂಧ ಮಸೂದೆ ಮಂಡನೆಯಾಗಿದ್ದು, 50 ವರ್ಷ ಮೀರಿದ ಶಿಕ್ಷಕಿ ಮತ್ತು 55 ವರ್ಷ ಮೀರಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಯಿಂದ ವಿನಾಯಿತಿ ಕಲ್ಪಿಸಲಾಗಿದೆ. ವಿಶೇಷ ಚೇತನರಿಗೂ ಇದು ಅನ್ವಯ ಆಗಲಿದೆ.
ಮಂಗಳವಾರ ಸದನದಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಅವರು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಮಸೂದೆ-2020 ಮಂಡಿಸಿದ್ದು, ಚರ್ಚೆಯ ಬಳಿಕ ಸ್ಪಷ್ಟತೆ ಸಿಗಲಿದೆ.
ವಲಯವಾರು ವರ್ಗಾವಣೆಗಳಿಂದ ವಿನಾಯಿತಿ ನೀಡುವ ಕುರಿತು ಮಸೂದೆಯಲ್ಲಿ ಉಲ್ಲೇಖವಾಗಿದ್ದು ಗ್ರಾಮೀಣ ಭಾಗದಲ್ಲಿ 10 ವರ್ಷ ಸೇವೆ ಸಲ್ಲಿಸದ, ನಗರ ಪ್ರದೇಶದಲ್ಲಿ 10 ವರ್ಷ ನಿರಂತರ ಸೇವೆ ಸಲ್ಲಿಸಿರುವವರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ವರ್ಗಾವಣೆಗೆ ಸೇವಾ ಜ್ಯೇಷ್ಠತೆಯನ್ನು 3 ವರ್ಷಗಳಿಗೆ ಇಳಿಸಲಾಗಿದೆ.
ಹಾಗೆಯೇ ಈ ಮಸೂದೆಯ ಪ್ರಕಾರ ಶಿಕ್ಷಕ ಅಥವಾ ಶಿಕ್ಷಕಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕೊನೆಯ ಹಂತದ ಕಾಯಿಲೆ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂಗವಿಕಲ ಪ್ರಕರಣ, 12 ವರ್ಷ ಒಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ವಿಧುರ ಅಥವಾ ವಿಚ್ಛೇದಿತ ಶಿಕ್ಷಕ, ಗರ್ಭಿಣಿ ಅಥವಾ ಒಂದು ವರ್ಷದ ಮಗು ಹೊಂದಿರುವ ಶಿಕ್ಷಕಿಗೆ ಸೇವಾ ಅವಧಿಯಲ್ಲಿ ಒಮ್ಮೆ ವರ್ಗಾವಣೆಯಿಂದ ವಿನಾಯಿತಿ ಪಡೆಯಲು ಅವಕಾಶವಿದೆ.
ಶೇ. 15ರ ಮಿತಿಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಪ್ರಸ್ತಾವವಿದೆ. ವಿನಾಯಿತಿ ವರ್ಗಾವಣೆ ಇದರ ವ್ಯಾಪ್ತಿಗೆ ಬರುವುದಿಲ್ಲ.
ಸಿ ವಲಯದಲ್ಲಿ (ಗ್ರಾಮೀಣ ಭಾಗ) 10 ವರ್ಷಗಳ ಸೇವೆಯನ್ನು ಸಲ್ಲಿಸದ ಮತ್ತು ಎ ವಲಯದಲ್ಲಿ (ನಗರ ಪ್ರದೇಶ) ನಿರಂತರವಾಗಿ ಹತ್ತು ವರ್ಷಗಳಿಗೂ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವ ಶಿಕ್ಷಕರಿಗೆ ಬಿ ವಲಯ (ಪಟ್ಟಣ ಪ್ರದೇಶ) ಮತ್ತು ಸಿ ವಲಯ (ಗ್ರಾಮೀಣ ಭಾಗ)ಕ್ಕೆ ವರ್ಗಾವಣೆ ಮಾಡಬೇಕು ಎಂದು ತಿಳಿಸಲಾಗಿದೆ.
ಹೊಸ ಶಾಸನವು ಶಿಕ್ಷಕರ ಹಲವಾರು ಪ್ರವರ್ಗಗಳಿಗಾಗಿ ಎಲ್ಲ ವಿನಾಯಿತಿಗಳು ಮತ್ತು ಆದ್ಯತೆಗಳೊಂದಿಗೆ ಶಿಕ್ಷಕ ಸಂಪನ್ಮೂಲದ ವರ್ಗಾವಣೆ ಮತ್ತು ಸಮರ್ಪಕ ಮರು ಹಂಚಿಕೆ ಮಾಡುವ ವಿಷಯದಲ್ಲಿ ಶಿಕ್ಷಕ ಸ್ನೇಹಿಯಾಗಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.