ಬೆಂಗಳೂರು, ಮಾ. 11 (Daijiworld News/MB) :ವಿಧಾನಸಭೆಯಲ್ಲಿ ನಡೆದ ಸಂವಿಧಾನ ಮೇಲಿನ ಚರ್ಚೆಯ ಸಂದರ್ಭದಲ್ಲಿ ಶಾಸಕರ ಅನರ್ಹತೆ ವಿಷಯ ಪ್ರಸ್ತಾಪವಾಗಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮತ್ತು ಕಾಂಗ್ರೆಸ್ನ ಕೆ.ಆರ್.ರಮೇಶ್ ಕುಮಾರ್ ನಡುವೆ ಮಾತು ಆರಂಭವಾಗಿ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಮಾತಿಗೆ ಮಾತು ಬೆಳೆದು ರಮೇಶ್ ಕುಮಾರ್ ಅವರು ಕೀಳು ಮಟ್ಟದಲ್ಲಿ ಬೈದಿದ್ದು ಈ ಸಂದರ್ಭದಲ್ಲಿ ಸುಧಾಕರ್ ಏಕವಚನದಲ್ಲಿ ರಮೇಶ್ ಕುಮಾರ್ ಅವರನ್ನು ನಿಂದಿಸಿದ ಕಾರಣ ಕೆಲ ಕಾಲ ಗದ್ದಲ ಉಂಟಾಯಿತು. ಈ ಸಂದರ್ಭದಲ್ಲಿ ಹೊಸ ಸಚಿವರೆಲ್ಲರೂ ಸುಧಾಕರ್ ಅವರ ನೆರವಿಗೆ ಧಾವಿಸಿ, ಅತ್ಯಂತ ಕೀಳು ಮಟ್ಟದ ಪದ ಬಳಸಿದ ರಮೇಶ್ ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್– ಬಿಜೆಪಿ ಸದಸ್ಯರ ನಡುವೆ ಮಾತುಕತೆ ಆರಂಭವಾದ ಹಿನ್ನಲೆಯಲ್ಲಿ ಎರಡು ಬಾರಿ ಕಲಾಪ ಮುಂದೂಡಲಾಯಿತು.
ನ್ನನ್ನೂ ಸೇರಿದಂತೆ 17 ಜನರನ್ನು ಅನರ್ಹಗೊಳಿಸುವ ಮೂಲಕ ಈ ಪೀಠದಿಂದ (ಸಭಾಧ್ಯಕ್ಷ) ಅನ್ಯಾಯ ಆಗಿದೆ. ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸಭಾಧ್ಯಕ್ಷರು ವಹಿಸಬೇಕಾದ ಇತಿ ಮಿತಿಯ ಪಾತ್ರವನ್ನು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಅವರು ನಮ್ಮ ರಾಜಕೀಯ ಜೀವನ ಹಾಳು ಮಾಡಿದರು. ಸಭಾಧ್ಯಕ್ಷರಾಗಿ ವರ್ತಿಸಲಿಲ್ಲ. ರಾಜಕೀಯ ಷಡ್ಯಂತ್ರದ ಭಾಗವಾಗಿ ಕೆಲಸ ಮಾಡಿದರು’ ಎಂದು ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ಮೊಗಸಾಲೆಯಲ್ಲಿ ಚಹ ಕುಡಿಯುತ್ತಾ ಟಿ.ವಿಯಲ್ಲಿ ಕಲಾಪ ವೀಕ್ಷಿಸುತ್ತಿದ್ದ ರಮೇಶ್ ಕುಮಾರ್ ಆ ಕೂಡಲೇ ಸದನಕ್ಕೆ ಧಾವಿಸಿ ಬಂದಿದ್ದು ಆ ಸಂದರ್ಭದಲ್ಲಿ ಕಾಂಗ್ರೆಸ್ನ ಇತರ ಸದಸ್ಯರು ಸುಧಾಕರ್ ಬಳಿ, "ನೀವು ಹಣದ ಆಸೆ ಮತ್ತು ಅಧಿಕಾರದ ಆಸೆಗೆ ಪಕ್ಷವನ್ನು ಬಿಟ್ಟು ಹೋದಿರಿ. ನಿಮಗೆ ಮಾತನಾಡಲು ನೈತಿಕ ಅಧಿಕಾರವಿಲ್ಲ ಎಂದು ಹೇಳಿದರು.
ಆ ಸಂದರ್ಭದಲ್ಲಿ ಆವೇಶಗೊಂಡಿದ್ದ ರಮೇಶ್ ಕುಮಾರ್ ಅವರು, "ಈ ವಿಷಯ ಚರ್ಚೆ ಮಾಡುವ ಹಾಗಿದ್ದರೆ ನಡೆಯಲಿ. ಸುಪ್ರೀಂಕೋರ್ಟ್ ಜಡ್ಜ್ಮೆಂಟ್ ಇಲ್ಲಿ ಪ್ರಸ್ತಾಪ ಮಾಡಬಹುದಾ ಕಾನೂನು ಸಚಿವರೇ ಹೇಳಿ" ಮಾಧುಸ್ವಾಮಿ ಅವರನ್ನು ಪ್ರಶ್ನಿಸಿದರು. ಮಾಧುಸ್ವಾಮಿ ಕೈಯಾಡಿಸಿ ಸುಮ್ಮನಾಗಿದ್ದು ರಮೇಶ್ ಕುಮಾರ್ ಹಾಗೂ ಸುಧಾಕರ್ ಅವರ ನಡುವೆ ಮಾತಿಗೆ ಮಾತು ಬೆಳೆಯಿತು. ಸಿಡಿಮಿಡಿಗೊಂಡ ರಮೇಶ್ ಕುಮಾರ್, ಆಕ್ಷೇಪಾರ್ಹ ಬೈಗುಳ ಬಳಸಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿಗೆ ಮುಂದಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಧಿಕ್ಕಾರ ಎಂದು ಕೂಗಿದರೆ, ಬಿಜೆಪಿ ಸದಸ್ಯರು ‘ರಮೇಶ್ ಕುಮಾರ್ ಅವರೇ ಗೂಂಡಾಗಿರಿ ನಿಲ್ಲಿಸಿ ಎಂದು ಘೋಷಣೆ ಕೂಗಿದರು. ಇದರಿಂದಾಗಿ ೨ ಬಾರೀ ಕಲಾಪ ಮುಂದೂಡಲಾಯಿತು.
ಈ ಕುರಿತಾಗಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಮೇಶ್ ಕುಮಾರ್ ನನ್ನ ವಿರುದ್ಧ ಕೀಳು ಮಟ್ಟದ ಬೈಗುಳ ಬಳಸಿ ನಿಂದಿಸಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ್ದೇನೆ. ಪದ ಹಿಂದಕ್ಕೆ ಪಡೆಯುವ ತನಕ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ ರಮೇಶ್ ಕುಮಾರ್ ಮಾತನಾಡಿ, "ಕೆಲವು ತಿಂಗಳ ಹಿಂದೆ ಲಂಡನ್ನಲ್ಲಿ ರಾಹುಲ್ಗಾಂಧಿಗೆ ಸಲಹೆ ಕೊಡುತ್ತಿದ್ದ ಆಸಾಮಿ ಪಕ್ಷಕ್ಕೆ ದ್ರೋಹ ಎಸಗಿ ಬಿಜೆಪಿ ಸೇರಿ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಲು ಬಂದಿದ್ದಾನೆ" ಎಂದು ಹೇಳಿದ್ದಾರೆ.