ಮುಂಬೈ, ಮಾ.11 (DaijiworldNews/PY) : ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶದಲ್ಲಿ ಪತನದ ಅಂಚಿನಲ್ಲಿದ್ದು, ಆಪರೇಷನ್ ಕಮಲ ಸಿದ್ದತೆ ಮಹಾರಾಷ್ಟ್ರದಲ್ಲೂ ನಡೆದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ, ಎಸ್ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮಿತ್ರ ಪಕ್ಷ ಕಾರ್ಯತಂತ್ರ ರೂಪಿಸಿವೆ.
ಈ ನಡುವೆ ಹಿರಿಯ ಮುಖಂಡ ಶರದ್ ಪವಾರ್ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ. ಆದರೆ, ಮಾ.26ರಂದು ರಾಜ್ಯಸಭೆಗೆ ಮಹಾರಾಷ್ಟ್ರದ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಸಂಬಂಧ ಪಕ್ಷದ ಶಾಸಕರ ಜೊತೆ ಚರ್ಚೆ ನಡೆಸುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎರಡು ರಾಜ್ಯಸಭಾ ಸ್ಥಾನಗಳಿಗೆ ನಾವು ಸ್ಪರ್ಧಿಸಲಿದ್ದೇವೆ. ಪಕ್ಷದ ಅಭ್ಯರ್ಥಿಗಳಾಗಿ ಪವಾರ್ ಹಾಗೂ ಫೌಝಿಯಾ ಖಾನ್ ಆಗಿರುತ್ತಾರೆ. ಇಬ್ಬರೂ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಪವಾರ್ ಅವರು ಸಂಜೆ ನಡೆಯುವ ಸಭೆಯಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹಿರಿಯ ಎಸ್ಸಿಪಿ ಮುಖಂಡರೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರಕ್ಕೂ, ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗೂ ಯಾವುದೇ ಸಂಬಂಧವೂ ಇಲ್ಲ. ಮಹಾರಾಷ್ಟ್ರ ಸರ್ಕಾರ ಸುಭದ್ರವಾಗಿದೆ ಎಂದು ಮತ್ತೊರ್ವ ಮಿತ್ರಪಕ್ಷ ಕಾಂಗ್ರೆಸ್ನ ಮುಖಂಡರು ತಿಳಿಸಿದ್ದಾರೆ.
ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಮಧ್ಯಪ್ರದೇಶದ ಪರಿಸ್ಥಿತಿ ಭಿನ್ನ ಎಂಬುದಾಗಿ ಕಾಂಗ್ರೆಸ್ ಮುಖಂಡ ಹಾಗೂ ಲೋಕೋಪಯೋಗಿ ಖಾತೆ ಸಚಿವ ಅಶೋಕ್ ಚವ್ಹಾಣ್ ತಿಳಿಸಿದ್ದಾರೆ. ಮಿತ್ರಪಕ್ಷಗಳೊಂದಿಗೆ ಉತ್ತಮ ಹೊಂದಾಣಿಕೆಯಿದೆ. ಬಿಜೆಪಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನಕ್ಕೆ ಮಾಡಿದರೆ ಅದು ವಿಫಲವಾಗುತ್ತದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್ ಹೇಳಿದ್ದಾರೆ.