ಬೆಂಗಳೂರು, ಮಾ.11 (DaijiworldNews/PY) : ಕೊರೊನಾ ವೈರಸ್ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ನರ್ಸರಿ, ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ರಜಾ ಘೋಷಿಸಿದ್ದು, ಕೆಲವು ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ಗೌರವ ನೀಡದೇ ತಮ್ಮದೇ ಬೇರೆ ಸಾಮ್ರಾಜ್ಯ ಎಂದು ತಳಿದು ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ತಿಳಿದುಬಂದಿದೆ.
ಈ ಪ್ರದೇಶಗಳ ಎಲ್ಲಾ ಶಾಲೆಗಳು ಸರ್ಕಾರದ ಆದೇಶವನ್ನು ಪಾಲಿಸುವುದು ಕರ್ತವ್ಯ. ಈ ಮೂಲಕ ರಾಜ್ಯ ಸರ್ಕಾರದ ಈ ಆದೇಶವನ್ನು ಪಾಲಿಸದೇ ಇರುವ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಸರ್ಕಾರದ ಆದೇಶವನ್ನು ಪಾಲಿಸದೇ ಇರುವ ಶಾಲೆಗಳ ವಿರುದ್ದ ಕ್ರಮ ತೆಗದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಳೆ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿರುವುದನ್ನು ಮನಗಾಣಬೇಕು. ಸರ್ಕಾರದ ಆದೇಶವನ್ನು ಪಾಲಿಸದೇ ಇರುವುದು ನಮ್ಮ ಪ್ರತಿಷ್ಟೆ ಎಂದುಕೊಂಡಿರುವ ಎಲ್ಲಾ ಶಾಲೆಗಳಿಗೆ ಇದು ಒಂದು ಕಿವಿಮಾತು. ಮಕ್ಕಳ ಹಿತಕ್ಕಿಂತ ನಿಮ್ಮ ಪ್ರತಿಷ್ಟೆ ಮುಖ್ಯವಲ್ಲ ಎಂದು ತಿಳಿಸಿದ್ದಾರೆ.