ಬೆಂಗಳೂರು, ಮಾ.11 (DaijiworldNews/PY) : ಸೋಮವಾರದ ತೈಲ ಬೆಲೆ ಇಳಿಕೆಯಿಂದ ಭಾರತದ ರಿಲಯನ್ಸ್ ಇಂಡಸ್ಟ್ರೀಸ್, ಒಎನ್ಜಿಸಿ ಹಾಗೂ ಅಮೆರಿಕದ ಹಲವು ತೈಲ ಕಂಪನಿಗಳ ಷೇರು ಕುಸಿತಕ್ಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಒಂದು ದಿನ ಕುಸಿತ ಹಾಗೂ ಸತತ ಎರಡು ದಿನ ಹೆಚ್ಚಳ ದಾಖಲಿಸಿದೆ. ಆದರೆ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಅಲ್ಪ ಇಳಿಕೆ ಆಗಿದೆ.
ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 50-60 ಪೈಸೆ ಇಳಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 72.70 ಹಾಗೂ ಡೀಸೆಲ್ಗೆ 65.16 ಇದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 70.29 ಹಾಗೂ ಡೀಸೆಲ್ ದರ 63.01ಕ್ಕೆ ತಲುಪಿದೆ. 2019ರ ಜುಲೈ ನಂತರದಲ್ಲಿ ದೆಹಲಿಯಲ್ಲಿ ಮೊದಲ ಬಾರಿಗೆ ಸೋಮವಾರ ಪೆಟ್ರೋಲ್ ದರ 70.59 ತಲುಪಿತ್ತು. ಡೀಸೆಲ್ ದರ 63.26 ಆಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೆಬ್ರುವರಿ 27ರಿಂದ ತೈಲ ದರ ಇಳಿಮುಖವಾಗಿದೆ.
ಜಗತ್ತಿನ ಅತೀದೊಡ್ಡ ಕಚ್ಚಾ ತೈಲ ಉತ್ಪಾದಕ ಸೌದಿ ಅರಮ್ಕೊ, ಏಪ್ರಿಲ್ ವೇಳೆಗೆ ಪ್ರತಿ ದಿನದ ಕಚ್ಚಾ ತೈಲ ಪೂರೈಕೆಯನ್ನು 12.3 ಮಿಲಿಯನ್ ಬ್ಯಾರೆಲ್ಗೆ ಹೆಚ್ಚಳ ಮಾಡಲು ಯೋಜನೆ ರೂಪಿಸಿದೆ. ನವೆಂಬರ್ಗೆ ಅಮೇರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದ್ದು, ಸೌದಿ-ರಷ್ಯಾ ದರ ಸಮರ ಸೇರಿದಂತೆ ಜಾಗತಿಕ ವಹಿವಾಟು ಅಮೆರಿಕದ ಶೇಲ್ ಉದ್ಯಮದ ಮೇಲೆ ಪರಿಣಾಮ ಬೀರಬಹುದಾಗಿದೆ.
ಸೌದಿ ಅರೇಬಿಯಾಗೆ ಪ್ರತೀ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಗೆ ತಗಲುವ ವೆಚ್ಚ 3-5 ಡಾಲರ್. ಪ್ರತೀ ಬ್ಯಾರೆಲ್ ತೈಲವನ್ನು ರಷ್ಯಾ 16-18 ಡಾಲರ್ ವೆಚ್ಚದಲ್ಲಿ ಸಂಸ್ಕರಿಸುತ್ತದೆ. ಆದರೆ, ತೈಲ ಉತ್ಪಾದನೆಗೆ ಅಮೆರಿಕ ಶೇಲ್ ಬಾವಿಗಳಿಂದ 68 ಡಾಲರ್ ತಗುಲುತ್ತದೆ. ಅಮೆರಿಕದ ಶೇಲ್ ಗ್ಯಾಸ್ ವಲಯಗಳಲ್ಲಿ ಭಾರತದ ಕಂಪನಿಗಳು 4 ಬಿಲಿಯನ್ ಡಾಲರ್ (ಅಂದಾಜು 29,500 ಕೋಟಿ) ಹೂಡಿಕೆ ಮಾಡಿವೆ. ಭಾರತ ಅಮೆರಿಕದಿಂದ ದ್ರವೀಕೃತ ನೈಸರ್ಗಿಕ ಅನಿಲ ಹಾಗೂ ಕಚ್ಚಾ ತೈಲವನ್ನು ಪಡೆಯುತ್ತಿದೆ.