ಮುಂಬೈ, ಮಾ. 11 (Daijiworld News/MB) : ಮಧ್ಯಪ್ರದೇಶದ ವೈರಸ್' ಪಶ್ಚಿಮ ರಾಜ್ಯಕ್ಕೆ ಪ್ರವೇಶಿಸುವುದಿಲ್ಲ. ನಮ್ಮ ಪಕ್ಷದ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಸುರಕ್ಷಿತವಾಗಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಯ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, "ಮಹಾರಾಷ್ಟ್ರ ವಿಕಾಸ್ ಅಘಡಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಈ ಕುರಿಯತಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ವೈರಸ್ ಪ್ರವೇಶಿಸುವುದಿಲ್ಲ. ಮಹಾರಾಷ್ಟ್ರದ ಶಕ್ತಿಯು ಭಿನ್ನವಾಗಿದೆ. 100 ದಿನಗಳ ಹಿಂದಷ್ಟೇ ಇಂತಹದ್ದೇ ಆದ ಒಂದು ಕಾರ್ಯಾಚರಣೆಯೂ ನೆಲಕಚ್ಚಿದೆ. ಮಹಾ ವಿಕಾಸ್ ಅಘಡಿ ಸರ್ಕಾರವು ಬೈಪಾಸ್ ಸರ್ಜರಿ ಮಾಡಿತು ಹಾಗೂ ಮಹಾರಾಷ್ಟ್ರವನ್ನು ಕಾಪಾಡಿದೆ ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿಯಿಂದ ತನ್ನ ಮೈತ್ರಿಯನ್ನು ಹಿಂತೆಗೆದ ಶಿವಸೇನಾ, ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಮೈತ್ರಿ ಸರ್ಕಾರವನ್ನು ರಚಿಸಿದೆ.
ಮಧ್ಯಪ್ರದೇಶದಲ್ಲಿ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆ ಬಳಿಕ 22 ಶಾಸಕರು ರಾಜೀನಾಮೆ ಸಲ್ಲಿಸಿದ್ದರು.