ನವದೆಹಲಿ, ಮಾ.11 (DaijiworldNews/PY) : ಹಣಕಾಸು ಅಕ್ರಮ ವರ್ಗಾವಣೆ ಹಾಗೂ ದೆಹಲಿ ಗಲಭೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಎಪಿ ಪಾರ್ಟಿಯಿಂದ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್, ಇಸ್ಲಾಮಿಕ್ ಸಂಘಟನೆ ಪಿಎಫ್ಐ ಹಾಗೂ ಇತರರ ವಿರುದ್ಧ ಅನುಷ್ಠಾನ ನಿರ್ದೇಶನಾಲಯವು ಪ್ರಕರಣ ದಾಖಲಿಸಿದೆ.
ಈಶಾನ್ಯ ದೆಹಲಿಯಲ್ಲಿ ಕಳೆದ ತಿಂಗಳು ನಡೆದ ಸಿಎಎಗೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ಧರು ಹಾಗೂ ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಈ ವೇಳೆ ಗುಪ್ತದಳದ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಕೊಲೆ ಮಾಡಿ ಚರಂಡಿಗೆ ಎಸೆಯಲಾಗಿತ್ತು. ಈ ಪ್ರಕರಣದ ಆರೋಪಿಯಾದ ಉತಾಹೀರ್ ಹುಸೇನ್ ವಿರುದ್ದ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ಧಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧವೂ ಇದೇ ರೀತಿಯ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಹುಸೇನ್ ದೆಹಲಿ ಪೊಲೀಸರ ಕಸ್ಟಡಿಯಲ್ಲಿದ್ಧಾರೆ.
ತಾಹಿರ್ ಹುಸೇನ್, ಪಿಎಫ್ಐ ಹಾಗೂ ಇತರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದ ಸಂದರ್ಭದಲ್ಲಿ ದೆಹಲಿಯಲ್ಲಿ ಕೋಮು ಗಲಭೆಗಳನ್ನು ಪ್ರಾಯೋಜಿಸಲು ಹಣಕಾಸು ನೆರವಿಗಾಗಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳ ಬಗ್ಗೆ ದೆಹಲಿ ಪೊಲೀಸ್ ಕ್ರೈಮ್ ಬ್ರಾಂಚ್ ಈಗಾಗಲೇ ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದು, ಅದನ್ನು ಪರಿಗಣಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.