ಮುಂಬೈ, ಮಾ.11 (DaijiworldNews/PY) : ಯೆಸ್ ಬ್ಯಾಂಕ್ನ ಸ್ಥಾಪಕಾಧ್ಯಕ್ಷ ರಾಣಾ ಕಪೂರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಬ್ಯಾಂಕಿನ ಹೆಸರಿನಲ್ಲಿ ರಾಣಾ ನಡೆಸುತ್ತಿದ್ದ ಒಂದೊಂದು ಹಗರಣಗಳು ಬೆಳಕಿಗೆ ಬರುತ್ತಿವೆ.
2.25 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯವಹಾರನ್ನು ಯೆಸ್ ಬ್ಯಾಂಕ್ ನಡೆಸುತ್ತಿದ್ದರೂ, ಈ ಬ್ಯಾಂಕ್ನ ಅನುತ್ಪಾದಕ ಆಸ್ತಿ 42 ಸಾವಿರ ಕೋಟಿ ರೂಪಾಯಿಗಳಷ್ಟು ಇತ್ತು ಎನ್ನುವ ಮಾಹಿತಿ ದೊರೆತಿದೆ. ರಾಣಾ ಕಪೂರ್ ಸೂಚನೆ ಮೇರೆಗೆ ಬ್ಯಾಂಕ್ ಅಧಿಕಾರಿಗಳು ಆತ ಸೂಚಿಸಿದ್ದ ಕಾರ್ಪೊರೇಟ್ ಕಂಪೆನಿಗಳಿಗೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಇದರಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ನೀಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಇಡಿ ಅಧಿಕಾರಿಗಳು ಕಾಕ್ಸ್ ಆ್ಯಂಡ್ ಕಿಂಗ್ಸ್, ಡಿ.ಎಚ್.ಎಫ್.ಎಲ್. ಗ್ರೂಪ್, ಸಹನಾ ಗ್ರೂಪ್, ರೇಡಿಯಸ್ ಗ್ರೂಪ್ ಮೊದಲಾದ ಕಂಪೆನಿಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದ ವೇಳೆ ಈ ಎಲ್ಲಾ ಮಾಹಿತಿಗಳು ತಿಳಿದಿವೆ. ಅಲ್ಲದೇ, ಆರ್ಬಿಐ ನಿಯಮಾವಳಿಗಳನ್ನು ಮೀರಿ ಬೃಹತ್ ಸ್ವರೂಪದ ಈ ಸಾಲಗಳನ್ನು ನೀಡಲಾಗಿದೆ ಎನ್ನುವ ವಿಚಾರವು ರಾಣಾ ಕಪೂರ್ನನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲ್ನೋಟಕ್ಕೆ ತಿಳಿದುಬಂದಿದೆ.
ರಾಣಾ ತನ್ನ ಹೆಂಡತಿ ಬ್ಯಾಂಕ್ ಖಾತೆಗೆ ಕೆಲವೊಂದು ನಿರ್ಧಿಷ್ಟ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿರುವ ಸಾಲದ ಕುರಿತಾಗಿ ಮತ್ತು ಆ ಮೂಲಕ ಪಡೆದುಕೊಂಡಿರುವ ಕಿಕ್ ಬ್ಯಾಕ್ ಹಣವನ್ನು ವರ್ಗಾಯಿಸಿರುವ ಕುರಿತಾಗಿಯೂ ಇಡಿ ತನಿಖೆಯನ್ನು ನಡೆಸಲಿದೆ.