ನವದೆಹಲಿ, ಮಾ.11 (DaijiworldNews/PY) : ತನ್ನೆಲ್ಲ ಉಳಿತಾಯ ಖಾತೆಯ (ಎಸ್ಬಿ) ಬಡ್ಡಿ ದರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 3ಕ್ಕೆ ಪರಿಷ್ಕರಿಸಿದೆ.
ಪ್ರತೀ ತಿಂಗಳು ಎಸ್ಬಿ ಖಾತೆಯಲ್ಲಿ ನಿರ್ವಹಿಸಬೇಕಾಗಿದ್ದ ಸರಾಸರಿ ಕನಿಷ್ಠ ಮೊತ್ತದ (ಎಎಂಬಿ) ನಿಯಮ ರದ್ದುಪಡಿಸಿದೆ.
ಬ್ಯಾಂಕ್, ಗ್ರಾಹಕರಿಗೆ ಮೊದಲ ಆದ್ಯತೆ ಧೋರಣೆಯಡಿ, ಎಸ್ಎಂಎಸ್ಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನೂ ಕೈಬಿಟ್ಟಿದೆ. ಗ್ರಾಹಕರಿಗೆ ಈ ನಿರ್ಧಾರವು ದೊಡ್ಡ ಸಮಾಧಾನ ಕೊಡಲಿದೆ.
ಎಸ್ಬಿ ಖಾತೆಯಲ್ಲಿರುವ ಎಲ್ಲಾ ರೀತಿಯ ಮೊತ್ತಕ್ಕೆ ಏಕರೂಪದ ಬಡ್ಡಿದರ ನಿಗದಿಪಡಿಸಲಾಗಿದೆ. ಇದುವರೆಗೆ ಈ ಖಾತೆಯಲ್ಲಿನ 1 ಲಕ್ಷವರೆಗಿನ ಮೊತ್ತಕ್ಕೆ ಶೇ 3.25 ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 3ರಷ್ಟು ಬಡ್ಡಿ ದರ ಜಾರಿಯಲ್ಲಿತ್ತು. ಈ ತೀರ್ಮಾನವು 44.51 ಕೋಟಿ ಬ್ಯಾಂಕ್ನ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.
ಪ್ರತಿ ತಿಂಗಳೂ ಎಸ್ಬಿ ಖಾತೆಯಲ್ಲಿ ಗ್ರಾಹಕರು ನಿರ್ದಿಷ್ಟ ಸರಾಸರಿ ಮೊತ್ತ ಕಾಯ್ದುಕೊಳ್ಳುವ ನಿಯಮವನ್ನು ಕೈಬಿಡಲಾಗಿದೆ. ಪ್ರತಿ ತಿಂಗಳೂ ಗ್ರಾಹಕರ ಉಳಿತಾಯ ಖಾತೆಯಲ್ಲಿ ದಿನದ ಅಂತ್ಯದಲ್ಲಿ ಉಳಿಯುವ ತಿಂಗಳ ಒಟ್ಟು ಮೊತ್ತವನ್ನು ತಿಂಗಳ ಒಟ್ಟು ದಿನಗಳಿಂದ ಭಾಗಿಸಿದಾಗ ಬರುವ ಮೊತ್ತವು ಆ ತಿಂಗಳ ಸರಾಸರಿ ಬ್ಯಾಲನ್ಸ್ ಆಗಿರುತ್ತದೆ.
3,000, 2,000 ಹಾಗೂ 1,000ರಂತೆ ಕ್ರಮವಾಗಿ ಎಸ್ಬಿಐ ಗ್ರಾಹಕರು ಸದ್ಯಕ್ಕೆ ಮೆಟ್ರೊ, ಅರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಎಂಬಿ ಕಾಯ್ದುಕೊಳ್ಳಬೇಕಾಗಿತ್ತು. ಖಾತೆಯಲ್ಲಿ ಈ ಮೊತ್ತದ ಎಎಂಬಿ ಇರದಿದ್ದರೆ 5ರಿಂದ 15ರಂತೆ ದಂಡ ಹಾಗೂ ತೆರಿಗೆ ವಿಧಿಸುತ್ತಿತ್ತು.