ನವದೆಹಲಿ, ಮಾ.11 (DaijiworldNews/PY) : ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಕಪಿಲ್ ಮಿಶ್ರಾ ಅವರ ಪ್ರಚೋದನಾಕಾರಿ ಹೇಳಿಕೆಯೇ ದೆಹಲಿ ಹಿಂಸಾಚಾರಕ್ಕೆ ಕಾರಣ ಎಂಬ ಆರೋಪವನ್ನು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನಿರಾಕರಿಸಿದ್ಧಾರೆ.
ಬುಧವಾರ ಲೋಕಸಭೆಯಲ್ಲಿ ದೆಹಲಿ ಗಲಭೆ ವಿಚಾರದ ಬಗ್ಗೆ ನಡೆದ ಚರ್ಚೆ ಸಂದರ್ಭ ಮಾತನಾಡಿದ ಅವರು, "ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಅವರನ್ನು ದೆಹಲಿ ಹಿಂಸಾಚಾರಕ್ಕೆ ದೂರಲಾಗುತ್ತಿದೆ. ಜ.20 ಮತ್ತು ಜ.28ರಂದು ಅನುರಾಗ್ ಮತ್ತು ವರ್ಮಾ ಅವರು ಹೇಳಿಕಿ ನೀಡಿದ್ದರು. ಆದರೂ, ಫೆ.23ರಂದು ಗಲಭೆ ಆರಂಭವಾಗಿತ್ತು. ಕಪಿಲ್ ಮಿಶ್ರಾ ಅವರನ್ನು ಅಮಾನತುಲ್ಲಾ ಖಾನ್, ಶರ್ಜೀಲ್ ಇಮಾಮ್ ಹಾಗೂ ತಾಹೀರ್ ಹುಸೇನ್ ಅವರ ಕೃತ್ಯಗಳಿಗಾಗಿ ಹೊಣೆಯಾಗಿಸಲಾಗುತ್ತಿದೆ" ಎಂದು ತಿಳಿಸಿದರು.
ಲೇಖಿ ಅವರು ಕಾಂಗ್ರೆಸ್ನ ಹೆಸರು ಉಲ್ಲೇಖಿಸಿ ಟೀಕೆ ನಡೆಸಿ, "ಹಳೇ ಬೃಹತ್ ಪಕ್ಷ ದೆಹಲಿ ಗಲಭೆಗೆ ಕಾರಣ. 36 ಗಂಟೆಗಳಲ್ಲಿ ನಮ್ಮ ಸರ್ಕಾರ ಗಲಭೆಯನ್ನು ನಿಯಂತ್ರಿಸಿದೆ" ಎಂದು ಹೇಳಿದ್ಧಾರೆ.
"ಅವರು 1984ರ ದಂಗೆ ಬಗ್ಗೆ ಹೇಳುತ್ತಿದ್ದಾರೆ. ಆಗ ಆರೋಪಿಗಳಾಗಿದ್ದವರು ಈಗ ಮುಖ್ಯಮಂತ್ರಿ ಸ್ಥಾನದಲ್ಲಿದ್ಧಾರೆ ಎನ್ನುವುದನ್ನು ಅವರಿಗೆ ನಾನು ನೆನಪಿಸುತ್ತೇನೆ"ಎಂದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ದೆಹಲಿಯ ಶಾಹೀನ್ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತು. ಅಲ್ಲಿನ ವಾತಾವರಣವನ್ನು ಇದು ಹಾಳು ಮಾಡಿದ್ದು, ದೆಹಲಿಯಲ್ಲಿ ಗಲಭೆಗೆ ಪ್ರಚೋದನೆ ನೀಡಿತು ಎಂಬುದಾಗಿ ಬಿಜೆಪಿ ತಿಳಿಸಿದೆ.