ನವದೆಹಲಿ, ಮಾ.11 (DaijiworldNews/PY) : ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಲೋಕ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿರೋಧ ಪಕ್ಷದ ನಾಯಕರು ಘಟನೆಗೆ ಸಂಬಂಧಿಸಿದಂತ ಹಲವು ಪ್ರಶ್ನೆಗಳನ್ನು ಕೇಳಿದರು.
ಈ ಪ್ರಶ್ನೆಗಳಿಗೆ ಉತ್ತರ ನೀಡಿದ ಅಮಿತ್ ಶಾ ಅವರು, ನಾನು ದೆಹಲಿ ಹಿಂಸಾಚಾರದ ಸಂದರ್ಭ ಮೃತಪಟ್ಟ ಎಲ್ಲರಿಗೂ ಗೌರವ ಸೂಚಿಸುತ್ತೇನೆ ಗಾಊ ಅವರ ಕುಟುಂಬಗಳಿಗಾದ ನೋವಿಗೆ ಸಂತಾಪ ಸೂಚಿಸುತ್ತೇನೆ. ದೆಹಲಿಯಲ್ಲಿ ಫೆ.25ರ ಬಳಿಕ ಯಾವುದೇ ರೀತಿಯಾದ ಗಲಭೆಗಳು ನಡೆದಿಲ್ಲ. ದೆಹಲಿ ಗಲಭೆಯನ್ನು ರಾಜಕೀಯಗೊಳಿಸುವ ಹಲವಾರು ಪ್ರಯತ್ನಗಳು ನಡೆದಿವೆ ಎಂದರು.
ದೆಹಲಿ ಪೊಲೀಸರು ಗಲಭೆ ನಡೆದಾಗ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಗಲಭೆಯ ಸಂದರ್ಭ ಸ್ಥಳದಲ್ಲಿಯೇ ಇದ್ದರು. ಈ ಕುರಿತು ಮುಂದಿನ ದಿನಗಳಲ್ಲಿ ಪೊಲೀಸರು ವರದಿಯನ್ನು ನೀಡಲಿದ್ಧಾರೆ. ದೆಹಲಿಯ ಪಲೀಸರು ಗಲಭೆಯನ್ನು ಬೇರೆ ಬೇರೆ ಪ್ರದೇಶಗಳಗೆ ಹರಡದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಗಲಭೆಯನ್ನು ಕೇವಲ 36 ಗಂಟೆಗಳಲ್ಲಿ ನಿಯಂತ್ರಣಕ್ಕೆ ತಂದಿದ್ಧಾರೆ ಎಂದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ರಮ ಪೂರ್ವನಿಯೋಜನೆಗೊಂಡಿತ್ತು. ಕಾರ್ಯಕ್ರಮ ನನ್ನದೇ ಕ್ಷೇತ್ರದಲ್ಲಿ ನಡೆಯುತ್ತಿತ್ತು. ನನ್ನ ಭೇಟಿಯೂ ಕೂಡಾ ಪೂರ್ವ ನಿಯೋಜಿತವಾಗಿತ್ತು. ಯಾವುದೇ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿಲ್ಲ. ನಾನು ಎಲ್ಲಾ ಸಮಯದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಇದ್ದೆ. ನಾನೇ ರಾಷ್ಟ್ರೀಯ ಭದ್ರತಾ ಸಲಹರೆಗಾರರನ್ನು ಸ್ಥಳಕ್ಕೆ ತೆರಳುವಂತೆ ಹೇಳಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಹಾಗೂ ಐಯುಎಮ್ಎಲ್ನ ಕೆಲವು ನಾಯಕರು ಈ ಸಂದರ್ಭ ಸದನದಿಂದ ಎದ್ದು ಹೊರಹೋದರೆ, ಇನ್ನು ಕೆಲವರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಈ ನಡುವೆ ನಿತಿನ್ ಗಡ್ಕರಿ ಅವರು ಮಾತನಾಡಿ, ಗೃಹ ಸಚಿವರು ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವಾಗ ಅದನ್ನು ಪೂರ್ತಿಯಾಗಿ ಕೇಳದೇ ಎದ್ದು ಹೋಗುವುದು ಸದನಕ್ಕೆ ಶೋಭೆ ತರುವುದಿಲ್ಲ. ಎಂದರು.
ಸ್ಪೀಕರ್ ಓಮ್ ಬಿರ್ಲಾ ಅವರು ಮಾತನಾಡಿ, ಗೃಹ ಸಚಿವರ ಪೂರ್ತಿ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಬಳಿಕ ಮಾತು ಮುಂದುವರೆಸಿದ ಅಮಿತ್ ಶಾ ಅವರು, ಘಟನೆಗೆ ಸಂಬಂಧಿಸಿದ ಯಾವುದೇ ಮುಗ್ದ ವ್ಯಕ್ತಿಯ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ನಾವು ಖಚಿತಪಡಿಸುತ್ತೇವೆ. 49 ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣ ದಾಖಲಾಗಿದೆ ಹಾಗೂ 153 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆ.25ರಿಂದ ಶಾಂತಿ ಸಮಿತಿಯ 650ಕ್ಕೂ ಅಧಿಕ ಸಭೆಗಳು ನಡೆದಿವೆ ಎಂದು ಹೇಳಿದರು.
ಇಷ್ಟು ಕಡಿಮೆ ಸಮಯದಲ್ಲಿ ಯಾವುದೇ ಪಿತೂರಿಗಳಿಲ್ಲದೆ ಇಷ್ಟು ದೊಡ್ಡ ಗಲಭೆ ಹರಡುವುದು ಸಾಧ್ಯವಿಲ್ಲ. ಈ ವಿಚಾರವಾಗಿ ತನಿಖೆ ನಡೆಸಲು ನಾವು ಪಿತೂರಿ ಪ್ರಕರಣವನ್ನು ದಾಖಲಿಸಿದ್ದೇವೆ. ಈಶಾನ್ಯ ದೆಹಲಿಯ ಹಿಂಸಾಚಾರಕ್ಕೆ ಹಣಕಾಸು ಸಹಾಯ ಮಾಡಿದ ಮೂವರನ್ನು ಬಂಧಿಲಾಗಿದೆ ಎಂದು ಈ ಸಂದರ್ಭ ತಿಳಿಸಿದರು.