ನವದೆಹಲಿ, ಮಾ. 12 (Daijiworld News/MB) :18 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧವಾಗಿ ಸಿಡಿದೆದ್ದು ಕಾಂಗ್ರೆಸ್ ಪತನಕ್ಕೆ ಮೂರು ಕಾರಣಗಳನ್ನು ತಿಳಿಸಿದರು.
"ಕಾಂಗ್ರೆಸ್ ವಾಸ್ತವತೆಯನ್ನು ಒಪ್ಪದೆ ಹಳೆ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಹೊಸ ಸಿದ್ಧಾಂತ, ಹೊಸ ನಾಯಕತ್ವವನ್ನು ಗುರುತಿಸಲು ಸೋಲುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ 18 ತಿಂಗಳು ಕಳೆದರೂ ಆ ಕೆಲಸ ಆಗಲಿಲ್ಲ. ಇವೆಲ್ಲವೂ ತೀವ್ರ ನೋವುಂಟು ಮಾಡಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿ ಮೂರು ಕಾರಣಗಳನ್ನು ತಿಳಿಸಿದರು.
ಬಿಜೆಪಿ ಕುಟುಂಬದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಧನ್ಯವಾದಗಳು. ನನ್ನ ಜೀವನದಲ್ಲಿಎರಡು ಮಹತ್ವದ ದಿನಗಳಿವೆ. ಒಂದು 2011 ಸೆ. 20, ಅಂದು ನಾನು ಅಪ್ಪನನ್ನು ಕಳೆದುಕೊಂಡ ದಿನ. ಅದು ನನ್ನ ಜೀವನವನ್ನು ಬದಲಿಸಿದ ದಿನವಾಗಿತ್ತು. ಎರಡನೇ ದಿನವೆಂದರೆ 2020ರ ಮಾ.10.ಅಂದು ಅಪ್ಪನ 75ನೇ ಹುಟ್ಟುಹಬ್ಬ. ಅದೇ ದಿನ ನಾನು ಹೊಸ ನಿರ್ಧಾರವೊಂದನ್ನು ಕೈಗೊಂಡೆ. ನಾನು ಜನರ ಸೇವೆಯಲ್ಲಿ ನಂಬಿಕೆ ಇಟ್ಟವನು ಮತ್ತು ಅದನ್ನು ಸಾಧಿಸಲು ರಾಜಕೀಯವೇ ದಾರಿ ಎಂದು ನಂಬಿದವನು" ಎಂದು ಹೇಳಿದರು.
ಬಿಜೆಪಿ ಸೇರುವುದ್ದರಿಂದ ದೇಶಸೇವೆ ಸಲ್ಲಿಸಲೂ ಒಂದು ವೇದಿಕೆ ಸಿಕ್ಕಂತಾಗಿದೆ. ಈ ಹಿಂದೆ ಯಾವ ಸರಕಾರಗಳಿಗೂ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಸಿಕ್ಕಂತಹ ಜನಾದೇಶ ದೊರೆತಿರಲಿಲ್ಲ. ಬಿಜೆಪಿ ಕೇಂದ್ರದಲ್ಲಿ ಎರಡು ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಜನಾದೇಶವನ್ನು ಸಮರ್ಥವಾಗಿ ಬಳಸಿಕೊಂಡು ಕೆಲಸ ಮಾಡುತ್ತಿರುವ ಮೋದಿ ಅವರ ಸಾಮರ್ಥ್ಯ, ಅವರು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿಕೊಟ್ಟ ಗೌರವ, ಜನಪರವಾದ ಅದ್ಭುತ ಯೋಜನೆಗಳನ್ನು ಜಾರಿಗೊಳಿಸಿದ ರೀತಿಯನ್ನು ನೋಡುತ್ತಿದ್ದರೆ, ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸುರಕ್ಷಿತವಾಗಿ ಇದೆ ಎಂದು ನನಗೆ ಅನ್ನಿಸುತ್ತದೆ" ಎಂದರು.
ಕಾಂಗ್ರೆಸ್ನಲ್ಲಿದ್ದ ನನ್ನ ಅಪ್ಪ ದೇಶ ಮತ್ತು ನಮ್ಮ ರಾಜ್ಯಕ್ಕಾಗಿ ದುಡಿದಿದ್ದರು. ಆದರೆ ಈಗಿನ ಪರಿಸ್ಥಿತಿ ಮೊದಲಿನಂತೆ ಇಲ್ಲ. ಅಲ್ಲಿನ ಪರಿಸ್ಥಿತಿಗಳು ತುಂಬ ಬದಲಾಗಿವೆ. ಈ ಬಗ್ಗೆ ನನಗೆ ಅಪಾರ ಬೇಸರವಿದೆ ಎಂದು ಹೇಳಿದರು.