ನವದೆಹಲಿ, ಮಾ.12 (DaijiworldNews/PY) : ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಕಾರಣ ಹಾಗೂ ವಿಶ್ವ ಸಂಸ್ಥೆ ಈ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಒಂದು ತಿಂಗಳ ಅವಧಿಗೆ ಹೊರಜಗತ್ತಿನ ಜೊತೆ ಸಂಬಂಧ ಕಡಿದುಕೊಳ್ಳಲು ಭಾರತ ತೀರ್ಮಾನಿಸಿದೆ.
ವಿಶ್ವಸಂಸ್ಥೆ-ಅಂತಾರಾಷ್ಟ್ರೀಯ ಸಂಘ-ಸಂಸ್ಥೆ, ಅಧಿಕೃತ, ರಾಜತಾಂತ್ರಿಕ, ಉದ್ಯೋಗ ಹಾಗೂ ಪ್ರಾಜೆಕ್ಟ್ ವೀಸಾಗಳನ್ನು ಹೊರತುಪಡಿಸಿ ಉಳಿದೆಲ್ಲಾ ವೀಸಾಗಳನ್ನು ಎ.15 ರವರೆಗೆ ತಡೆಹಿಡಿಯುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.
ಅಲ್ಲದೇ ಎ.15ರವರೆಗೆ ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ದಾರರಿಗೆ ನೀಡಲಾಗಿದ್ದ ವೀಸಾಮುಕ್ತ ಪ್ರವಾಸ ಸೌಲಭ್ಯವನ್ನು ತಡೆಹಿಡಿಯಲಾಗಿದೆ. ಭಾರತ ಮಿಷಿನ್ಗೆ ಭಾರತ ಭೇಟಿಗೆ ಮುಂದಾಗುವ ವಿದೇಶಿಯರು ಸೂಕ್ತ ಕಾರಣಗಳನ್ನು ನೀಡುವುದು ಕಡ್ಡಾಯವಾಗಿದೆ.
ಆರೋಗ್ಯ ಸಚಿವ ಹರ್ಷವರ್ಧನ್ ಅವರ ನೇತೃತ್ವದ ಸಚಿವರ ಗುಂಪು ಕೊರೊನಾ ಸ್ಥಿತಿಗತಿಯ ಪರಾಮರ್ಶೆಗಾಗಿ ನಡೆಸಿದ ಸುದೀರ್ಘ ಸಭೆಯ ಬಳಿಕ ಈ ತೀರ್ಮಾನ ಪ್ರಕಟಿಸಲಾಗಿದೆ. ಸೋಂಕಿತ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿರುವ ಜೊತೆಗೆ 100ಕ್ಕೂ ಅಧಿಕ ದೇಶಗಳಿ ಗೆ ಈ ಮಹಾಮಾರಿ ಕೊರೊನಾ ವೈರಸ್ ಹರಡಿರುವ ಹಿನ್ನೆಲೆಯಲ್ಲಿ, ಸ್ವಯಂ ದಿಗ್ಬಂಧನವನ್ನು ಭಾರತ ಹಾಕಿಕೊಂಡಿದೆ.
ಮಾ.13ರಂದು ಈ ಆದೇಶ ಮಧ್ಯರಾತ್ರಿಯಿಂದ ಎಲ್ಲಾ ನಿರ್ಗಮನ ಕೇಂದ್ರಗಳಲ್ಲಿ ಜಾರಿಗೆ ಬರಲಿದೆ. ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕೇರಳದಲ್ಲಿ ಎಂಟು, ರಾಜಸ್ಥಾನ ಹಾಗೂ ದೆಹಲಿಯಲ್ಲಿ ತಲಾ ಒಂದು ಹೀಗೆ 10 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 68 ಮಂದಿಗೆ ಸೋಂಕು ತಗುಲಿದಂತಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಸುಮಾರು 1400ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇರಿಸಲಾಗಿದೆ.