ನವದೆಹಲಿ, ಮಾ.12 (DaijiworldNews/PY) : ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದವರ ಫೋಟೋ, ಹೆಸರು ಮತ್ತು ವಿಳಾಸಗಳನ್ನು ಒಳಗೊಂಡ ಪೋಸ್ಟರ್ಗಳನ್ನು ಹಾಕುವುದನ್ನು ಬೆಂಬಲಿಸುವ ಯಾವುದೇ ಕಾನೂನು ಇಲ್ಲ ಎಂದು ಬುಧವಾರ ಸುಪ್ರೀಂಕೋರ್ಟ್ ತಿಳಿಸಿದೆ.
ಅಲಹಾಬದ್ ಹೈಕೋರ್ಟ್ನ ಆದೇಶದ ವಿರುದ್ದ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಇಬ್ಬರು ನ್ಯಾಯಾಧೀಶರ ರಜಾಕಾಲದ ಪೀಠವು, ಲಕ್ನೋದಲ್ಲಿ ಪ್ರತಿಭಟನಕಾರರ ಹೆಸರು ಹಾಗೂ ಫೋಟೋಗಳನ್ನು ಒಳಗೊಂಡಿರುವ ಪೋಸ್ಟರ್ಗಳನ್ನು ತೆಗೆಯುವಂತೆ ಹೇಳಿದೆ. ಅಲ್ಲದೇ ಅಲಹಾಬಾದ್ ಹೈಕೋರ್ಟ್ನ ಆದೇಶಕ್ಕೆ ತಡೆ ಹೇರಲು ನಿರಾಕರಿಸಿದೆ. ಇದೇ ವೇಳೆ ತ್ರಿಸದಸ್ಯರ ಸಾಮಾನ್ಯ ಪೀಠಕ್ಕೆ ಪ್ರಕರಣವನ್ನು ವಹಿಸಲಾಗಿದೆ.
ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದಿಸಿದ್ದು, 95 ಮಂದಿಯನ್ನು ಸಂಬಂಧಿತ ಪ್ರಾಧಿಕಾರವು ವಿಚಾರಣೆ ನಡೆಸಿತ್ತು. ಹಿಂಸೆಗೆ 57 ಮಂದಿ ಕಾರಣರಾಗಿದ್ಧಾರೆ. ವಿವಿಧ ಸಮುದಾಯಗಳಿಗೆ ಈ ಮಂದಿ ಸೇರಿದವರಾಗಿದ್ಧಾರೆ ಎಂದು ತಿಳಿಸಿದರು.
ಹೋರಾಟಗಾರ ದಾರಾಪುರಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮಾತನಾಡಿ, ಈ ರೀತಿ ಯಾವಾಗಿನಿಂದ ಆರೋಪಿಗಳನ್ನು ಅವಮಾನಿಸಲು ಅನುಮತಿಸಲಾಗಿದೆ ಎಂದು ಕೇಳಿದರು. ಇಂತಹ ಪೋಸ್ಟರ್ಗಳಲ್ಲಿ ಕಾಣಿಸಿಕೊಂಡವರ ಮೇಲೆ ದಾಳಿ ನಡೆಸಲು ಜನರನ್ನು ಪ್ರಚೋದಿಸಲು ಇಂತಹ ಕೃತ್ಯದ ಉದ್ದೇಶ ಎಂದರು.