ನವದೆಹಲಿ, ಮಾ. 12 (Daijiworld News/MB) : ನವದೆಹಲಿಯಲ್ಲಿ ನಡೆದ ಸಂಸತ್ತಿನ ಅಧಿವೇಶನದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಕನ್ನಡದಲ್ಲಿ ಮಾತನಾಡಿದ್ದು ದೇಶದಲ್ಲಿ ಆಗುತ್ತಿರುವ ಎಲ್ಲಾ ತೊಂದರೆಗಳಿಗೆ ಕಾಂಗ್ರೆಸ್ ಮತ್ತು ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಪಕ್ಷಗಳು ಸಂಪೂರ್ಣ ಜವಾಬ್ದಾರಿ ಎಂದು ಆರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆದ ಎಲ್ಲಾ ಅವಾಂತರಗಳಿಗೆ ಪೌರತ್ವ ಕಾಯ್ದೆ ಪರ ಪ್ರತಿಭಟನಕಾರರು ಜವಾಬ್ದಾರಿ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ ಹಿನ್ನಲೆಯಲ್ಲಿ ಮಾತನಾಡಿದ ಅವರು, "ದೇಶದ್ರೋಹಿ ಭಾಷಣಗಳನ್ನು ಕೂಗಿದವರು ಓವೈಸಿ ಅವರು ಮಾಡಿದ ಭಾಷಣದಿಂದ ಪ್ರೇರಿತರಾದವರು" ಎಂದು ಅವರು ಹೇಳಿದ್ದಾರೆ.
ಈ ತೊಂದರೆಗಳ ಹೆಸರಿನಲ್ಲಿ ಈಗ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ನರೇಂದ್ರ ಮೋದಿಯವರ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತವಾಗಿ ಸ್ವಾತಂತ್ರ್ಯ ದೊರೆತ ಬಳಿಕ ಪಕ್ಷವನ್ನುವಿಸರ್ಜಿಸಬೇಕೆಂದು ಮಹಾತ್ಮ ಗಾಂಧಿ ಅವರು ಬಯಸಿದ್ದರು. ಅವರ ಮಾತು ಈಡೇರಿದ್ದರೆ ಈ ಅವಾಂತರಗಳು ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಹಾಗೆಯೇ ನೆರೆಯ ದೇಶಗಳಿಂದ ಭಾರತಕ್ಕೆ ಬರುವ ಅಲ್ಪಸಂಖ್ಯಾತ ಜನರಿಗೆ ರಕ್ಷಣೆ ನೀಡುವ ಕನಸು ಗಾಂಧೀಜಿಯವರಿಗೆ ಇತ್ತು. ಅವರ ಆಶಯಗಳನ್ನು ಅನುಸರಿಸುವ ಬದಲು, ಕಾಂಗ್ರೆಸ್ ಕೇವಲ ಅವರ ಹೆಸರಿನಲ್ಲಿ ಮತಗಳನ್ನು ಗಳಿಸಸುತ್ತಿದೆ ಎಂದು ದೂರಿದರು.
ಗಾಂಧಿಯವರ ಕನಸನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನಸಾಗಿಸಿದ್ದಾರೆ. ನರೇಂದ್ರ ಮೋದಿ ಅವರು 2014 ರಲ್ಲಿ ದೇಶದ ಆಡಳಿತವನ್ನು ವಹಿಸಿಕೊಂಡಾಗಿನಿಂದ, ಯಾವುದೇ ಒಂದು ಅವಾಂತರ ಅಥವಾ ಭಯೋತ್ಪಾದಕ ಚಟುವಟಿಕೆಗಳು ಸಂಭವಿಸಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅತಿ ದೊಡ್ಡ ಗಲಭೆಗಳು ಮತ್ತು ಪ್ರತಿಭಟನೆಗಳು ನಡೆದಿದೆ. ಬಿಜೆಪಿ ಸರ್ಕಾರವನ್ನು ಕೆಣಕುವ ಯೋಜಿತ ಪಿತೂರಿಯ ಭಾಗವೇ ನವದೆಹಲಿಯಲ್ಲಿನ ಅವಾಂತರಗಳು. ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಬೇಕು. ಆದರೆ ದೆಹಲಿ ಗಲಭೆಯಲ್ಲಿ ಭಾಗವಹಿಸಿದವರಲ್ಲಿ ಬಂದೂಕುಗಳು ಮತ್ತು ಮಾರಕ ಆಯುಧಗಳು ಇದ್ದವು. ಅವು ಎಲ್ಲಿಂದ ಬಂದವು ಎಂದು ನಾವು ಪ್ರಶ್ನಿಸಬೇಕಾಗಿದೆ "ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ವೇಳೆ ನಳಿನ್, "ನಾನು ಇರುವ ಜಿಲ್ಲೆಯಲ್ಲೇ ದೊಡ್ಡ ಗಲಭೆ ನಡೆದಿದೆ. ಈ ಗಲಭೆ ನಡೆದ ಹಿಂದಿನ ದಿನ ಕಾಂಗ್ರೆಸ್ ಸಭೆ ಸೇರಿದೆ" ಎಂದರು.
ಆ ಸಭೆಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ಇಡೀ ದೇಶ ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದರು. ಖಾದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿವೆ. ಶಸ್ತ್ರಾಸ್ತ್ರ, ಮದ್ದುಗುಂಡುಗಳು ಇರುವ ಅಂಗಡಿಯಿಂದ ಅದನ್ನು ಕದಿಯುವ ಪ್ರಯತ್ನ ನಡೆಸಲಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಘಟನೆಯ ಹಿಂದೆ ಕಾಂಗ್ರೆಸ್ ಇದೆ ಎಂದು ಆರೋಪ ಮಾಡಿದರು.