ನವದೆಹಲಿ, ಮಾ.12 (DaijiworldNews/PY) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಮಾರ್ಚ್ 20ರ ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಜಾರಿಯಾಗಿದೆ. ಈ ನಡುವೆ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಪವನ್ ಗುಪ್ತ ಪೊಲೀಸರ ವಿರುದ್ದ ಎಫ್ಐಆರ್ ದಾಖಲು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ದೆಹಲಿ ಹೈಕೋರ್ಟ್ಗೆ ಅಪರಾಧಿ ಪವನ್ ಗುಪ್ತಾ ತನ್ನ ವಕೀಲರ ಮೂಲಕ ಅರ್ಜಿಯೊಂದನ್ನು ಸಲ್ಲಿಸಿದ್ಧಾನೆ. ಕೆಳಹಂತದ ನ್ಯಾಯಾಲಯವು ಪವನ್ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿದ್ದಾನೆ. ಪೊಲೀಸರು ತನಗೆ ಕಿರುಕುಳ ನೀಡಿ ಬಲವಂತದಿಂದ ಹೇಳಿಕೆ ಪಡೆದಿದ್ದಾರೆ ಎಂದು ಪವನ್ ಗುಪ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
ಗುರುವಾರ ಮಧ್ಯಾಹ್ನ ದೆಹಲಿ ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸಿತು. ಇಬ್ಬರು ಪೊಲೀಸ್ ಪೇದೆಗಳು ನನ್ನ ಮೇಲೆ ಜುಲೈ 26 ಹಾಗೂ 29ರಂದು ಹಲ್ಲೆ ಮಾಡಿದ್ಧಾರೆ. ಪೂರ್ವ ದೆಹಲಿಯ ಮಂಡೋಲಿ ಜೈಲಿನಲ್ಲಿದ್ಧಾಗ ಹಲ್ಲೆ ಮಾಡಲಾಗಿದೆ ಎಂದು ಪವನ್ ಗುಪ್ತ ಹೇಳಿದ್ದಾನೆ.
ನನ್ನ ತಲೆಗೆ ಪೊಲೀಸರ ಹಲ್ಲೆಯಿಂದ ಗಾಯವಾಗಿತ್ತು. ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ತಲೆಗೆ 14 ಹೊಲಿಗೆ ಹಾಕಲಾಗಿತ್ತು ಎಂದು ಪವನ್ ಗುಪ್ತ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಹರ್ಷ ವಿಹಾರ್ ಪೊಲೀಸ್ ಠಾಣೆಯಲ್ಲಿ ಪೇದೆಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಕೋರಿದ್ದಾನೆ.
ನನ್ನ ಮೇಲೆ ಅನಿಲ್ ಕುಮಾರ್ ಹಾಗೂ ಮತ್ತೊಬ್ಬ ಪೇದೆ ಹಲ್ಲೆ ಮಾಡಿದ್ದು ಗಲ್ಲಿಗೇರಿಸುವ ಮುನ್ನ ಎಫ್ಐಆರ್ ದಾಖಲಾಗಬೇಕು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾದಾಗ ಪೊಲೀಸ್ ಪೇದೆಗಳ ಗುರುತು ಹಿಡಿಯುವೆ ಎಂದು ಪವನ್ ಗುಪ್ತ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಪವನ್ ಗುಪ್ತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಂಡೋಲಿ ಜೈಲಿನ ಅಧಿಕಾರಿಗಳು ಏಪ್ರಿಲ್ 8ರೊಳಗೆ ಈ ಕುರಿತು ವರದಿ ನೀಡಬೇಕು ಎಂದು ಸೂಚಸಿದೆ. ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಈ ಅರ್ಜಿಯ ವಿಚಾರಣೆ ಯಾವುದೇ ಅಡಚಣೆ ಉಂಟು ಮಾಡುವುದಿಲ್ಲ ಎಂದು ಗುರುವಾರ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈಗ ಈತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. 2017ರ ಡಿಸೆಂಬರ್ 15ರಂದು ಪವನ್ ಗುಪ್ತ ಗಲ್ಲು ಶಿಕ್ಷೆ ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಈತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ 2020ರ ಫೆಬ್ರವರಿ 29 ಹಾಗೂ ಕ್ಷಮಾದಾನ ಅರ್ಜಿ ಮಾರ್ಚ್ 2, 2020ರಂದು ತಿರಸ್ಕಾರವಾಗಿದ್ದು, ಗಲ್ಲಿಗೇರಿಸುವುದು ಖಚಿತವಾಗಿದೆ.