ಬೆಂಗಳೂರು, ಮಾ.12 (DaijiworldNews/PY) : ಕರ್ನಾಟಕದಲ್ಲಿ ಮತ್ತೊಂದು ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೊರಗೆ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ ಐದಕ್ಕೇರಿದೆ.
ಗ್ರೀಸ್ನಿಂದ ಬೆಂಗಳೂರಿಗೆ ಆಗಮಿಸಿದ 26 ವರ್ಷದ ಯುವಕನಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಯುವಕನ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
1,220 ಮಂದಿಯನ್ನು ಇವತ್ತಿನವರೆಗೂ ನಿಗಾ ಇಡಲಾಗಿದ್ದು, ಈ ಪೈಕಿ 292 ಮಂದಿ ಕಳೆದ 28 ದಿನಗಳಿಂದ ನಿಗಾದಲ್ಲಿದ್ದಾರೆ. 906 ಮಂದಿ ಮನೆಯಲ್ಲಿದ್ದರೆ 18 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ ಎಂದು ತಿಳಿಸಿದೆ.
18 ಮಂದಿ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿ 12, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಬಳ್ಳಾರಿಯಲ್ಲಿ ಒಬ್ಬರು ನಿಗಾದಲ್ಲಿದ್ದಾರೆ. ಈ 18 ಮಂದಿ ಪರೀಕ್ಷೆ ನಡೆದಿದ್ದು ವರದಿ ಬರಬೇಕಿದೆ. ಇಲ್ಲಿಯವರೆಗೆ ದೇಶದಲ್ಲಿ 74 ಮಂದಿ ಕೊರೊನಾ ಸೋಂಕು ಬಂದಿದೆ.