ನವದೆಹಲಿ, ಮಾ.12 (DaijiworldNews/PY) : ಕೊರೊನಾ ವೈರಸ್ ಸೋಂಕಿನಿಂದ ಭಾರತದ ಆರ್ಥಿಕತೆಯು ಬಳಲುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಪ್ರಧಾನಿ ಮೋದಿ ಅವರು ಆರ್ಥಿಕತೆ ಕುಸಿದಿರುವುದಕ್ಕೆ ವಿಸ್ತೃತ ಹೇಳಿಕೆಯನ್ನು ನೀಡಬೇಕು ಎಂದು ಹೇಳಿದ್ದಾರೆ.
ಎಸ್ಬಿಐ ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿಯ ಬಡ್ಡಿದರವನ್ನು ಇಳಿಕೆ ಮಾಡುವ ಮುಖಾಂತರ ಪ್ರಧಾನಿ ಮೋದಿ ಅವರ ಸ್ನೇಹಿತರಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಯೆಸ್ ಬ್ಯಾಂಕ್ಗೆ ಸಹಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಣದೀಪ್ ಸುರ್ಜೇವಾಲಾ ಅವರು, ಈ ನಷ್ಟವನ್ನು ಷೇರು ಮಾರುಕಟ್ಟೆಯಲ್ಲಿ ಹಾಗೂ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಹೂಡಿದವರು ಅನುಭವಿಸಬೇಕಾಗುತ್ತದೆ. ಗುರುವಾರ ಸೆನ್ಸೆಕ್ಸ್ 2,700 ಅಂಕ ಕುಸಿಯುವ ಮೂಲಕ ಹೂಡಿಕೆದಾರರಿಗೆ 11 ಲಕ್ಷ ನಷ್ಟವನ್ನುಂಟುಮಾಡಿದೆ. ಸಣ್ಣ ಹಾಗೂ ಮಧ್ಯಮ ಹೂಡಿಕೆದಾರರು 72 ಗಂಟೆಗಳಲ್ಲಿ 18 ಲಕ್ಷ ಕೋಟಿ ಕಳೆದುಕೊಂಡರು. ವೇತನ ಪಡೆಯುವ ಹಾಗೂ ಸಣ್ಣ ಹೂಡಿಕೆದಾರರಿಗೆ ಸೇರಿದ ಹಣ ಇದಾಗಿದೆ ಎಂದು ಹೇಳಿದರು.
ಕೊರೊನಾ ವೈರಸ್ನಿಂದ ದೇಶದ ಅರ್ಥಿಕತೆ ಬಳಲುತ್ತಿದೆ. ಆದರೆ ಪ್ರಧಾನಿ ಮೋದಿ ಅವರು ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೌನವಾಗಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ವಿರುದ್ದ ಸೆನ್ಸೆಕ್ಸ್ ಕುಸುತ ಬಗ್ಗೆ ಟ್ವೀಟ್ ಮಾಡಿದ ಸುರ್ಜೇವಾಲಾ ಅವರು, ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ಅಮೆರಿಕನ್ ಡಾಲರ್ 1= 75.16. ರೂಪಾಯಿ ಈಗ ಮಾರ್ಗದರ್ಶಕ್ ಮಂಡಳಿಯ ದರ್ಜೆಗೆ ಬಂದಿದೆ ಎಂದು ಹೇಳಿದ್ಧಾರೆ.