ಬೆಂಗಳೂರು, ಮಾ13 ( Daijiworld News/MSP): ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸರಕಾರದ ಜೊತೆ ಕೈಜೋಡಿಸಲು ಇನ್ಫೋಸಿಸ್ ಫೌಂಡೇಶನ್ ಮುಂದೆ ಬಂದಿದೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಕರ್ನಾಟದಲ್ಲಿ ಕೊರೊನಾ ಓರ್ವರ ಸಾವಿಗೂ ಕಾರಣವಾಗಿದೆ. ಕೊರೋನ ವೈರಸ್ ಸೋಂಕು ತಗುಲಿರುವವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಾಜ್ಯದಲ್ಲಿ ಕೋವಿಡ್-19 ಚಿಕಿತ್ಸೆಗೆ ಆಸ್ಪತ್ರೆಯೊಂದನ್ನು ಅಣಿಗೊಳಿಸಲು ಇನ್ಫೊಸಿಸ್ ಫೌಂಡೇಷನ್ನ ಸುಧಾ ಮೂರ್ತಿ ಮುಂದೆ ಬಂದಿದ್ದಾರೆ.
'ಆಸ್ಪತ್ರೆಯೊಂದು ವಹಿಸಿದರೆ, ಅಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಇನ್ಫೊಸಿಸ್ ಫೌಂಡೇಷನ್ ಮೂಲಕ ಅಗತ್ಯ ವೆಚ್ಚ ಭರಿಸಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸಲಾಗುತ್ತದೆ. ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿಯೂ ಸುಧಾಮೂರ್ತಿ ತಿಳಿಸಿದ್ದಾರೆ' ಎಂದು ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೂ ಸುಧಾ ಮೂರ್ತಿ ಚರ್ಚಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಪತ್ರ ರವಾನಿಸಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.