ಬೆಂಗಳೂರು, ಮಾ.13 (DaijiworldNews/PY) : ಎಡಿಜಿಪಿ ಆಗಿದ್ದ ಚರಣ್ ರೆಡ್ಡಿ (55) ಅವರು ಶುಕ್ರವಾರ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಚರಣ್ ರೆಡ್ಡಿ ಅವರು ಮಹಾವೀರ್ ಜೈನ್ ಆಸ್ಪತ್ರೆಗೆ ಕಳೆದ ತಿಂಗಳು ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ಚರಣ್ ರೆಡ್ಡಿ ಅವರು ಆಂಧ್ರಪ್ರದೇಶದ ಚಿತ್ತೂರಿನವರಾಗಿದ್ದು, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿ 1993ರಲ್ಲಿ ವೃತ್ತಿ ಪ್ರಾರಂಭಿಸಿದರು. ಅವರು ಅಕ್ರಮ ಗಣಿ ಪ್ರಕರಣದಲ್ಲಿ ಸರ್ಕಾರ ನೇಮಿಸಿದ್ದ ಎಸ್ಐಟಿ ತಂಡದ ಮುಖ್ಯಸ್ಥರೂ ಆಗಿದ್ದರು. ಸಿಬಿಐನಲ್ಲೂ 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಸದ್ಯ ಸಿಐಡಿ ಎಡಿಜಿಪಿ ಆಗಿ ಕೆಲಸ ಮಾಡುತ್ತಿದ್ದರು.
ಸಂಜಯ ನಗರದ ಮನೆಗೆ ಅವರ ಪಾರ್ಥಿವ ಶರೀರ ರವಾನೆಯಾಗಲಿದ್ದು, ಬಳಿಕ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.