ಕಲಬುರ್ಗಿ, ಮಾ13 ( Daijiworld News/MSP): 76 ವರ್ಷದ ಕಲಬುರಗಿಯ ವಯೋವೃದ್ಧ ಕೊರೋನಾ ವೈರಸ್ ಸೋಂಕಿನಿಂದ ನಿಧನ ಹೊಂದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಾದ್ಯಂತ ರೋಗ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಮೃತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿದ್ದು 31 ಜನರನ್ನು ಹೈ ರಿಸ್ಕ್ ಮತ್ತು 15 ಜನರನ್ನು ಲೋ ರಿಸ್ಕ್ ಎಂದು ಪರಿಗಣಿಸಿ ಇ.ಎಸ್.ಐ.ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ. ಇ.ಎಸ್.ಯ.ಸಿ.ಆಸ್ಪತ್ರೆಯಲ್ಲಿ ಇದಕ್ಕಾಗಿ 200 ಬೆಡ್ ಕ್ವಾರಂಟಯನ್ ವಾರ್ಡ್, 50 ಬೆಡ್ ಐಸೋಲೇಷನ್ ವಾರ್ಡ್ ಸ್ಥಾಪಿಸಿ ವೈದ್ಯ ಸಿಬ್ಬಂದಿಯನ್ನು ನಿಯೋಜಿಸಿದೆ.
ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ತಪಾಸಣಾ ಕೇಂದ್ರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಲ್ಲದೆ ಎಲ್ಲ ತಾಲೂಕ ಹಂತದಲ್ಲಿಯೂ ಐಸೋಲೇಷನ್ ವಾರ್ಡ್ ಸ್ಥಾಪಿಸಿದೆ. ಕೊರೋನಾ ಭೀತಿಯಿಂದ ಶುಕ್ರವಾರ ನಡೆಯಬೇಕಾದ ಪ್ರಸಿದ್ಧ ಶ್ರೀ ಶರಣಬಸವೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದ್ದು, ಇದೇ ಮಾದರಿಯನ್ನು ಎಲ್ಲಾ ಧಾರ್ಮಿಕ ಸಂಸ್ಥೆಗಳು ಜನಸಂದಣಿ ಸೇರುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜು (ಪರೀಕ್ಷೆಗಳನ್ನು ನಡೆಯುವುದನ್ನು ಹೊರತುಪಡಿಸಿ) ಒಂದು ವಾರಗಳ ಕಾಲ ಮುಚ್ಚಲು ಆದೇಶಿಸಿದೆ.ನಗರದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಮಾಲ್ ಗಳ ಸಹ ಒಂದು ವಾರ ಮುಚ್ಚಲು ಸೂಚಿಸಿದೆ.
ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಕುರಿತು ಪರೀಕ್ಷಿಸಲು ಲ್ಯಾಬ್ ತೆರೆಯಲು ಈಗಾಗಲೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆಅಗತ್ಯವಿರುವ ಕಿಟ್ಸ್ ಕುಡಲೆ ಸರಬರಾಜಿಗೆ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಅವರು ಕೇಂದ್ರ ಆರೋಗ್ಯ ಸಚಿವರನ್ನು ಮಾತನಾಡಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ ಕೆಮ್ಮು ನೆಗಡಿ ಜ್ವರ ಉಸಿರಾಟ ತೊಂದರೆಯಿಂದ ಯಾರೇ ದಾಖಲಾದರೂ ಅದರ ಬಗ್ಗೆ ಪ್ರತಿ ದಿನ ಮೂರು ಬಾರಿಜಿಲ್ಲಾಡಳಿತಕ್ಕೆ ಮತ್ತು ಆರೋಗ್ಯ ಇಲಾಖೆಗೆ ಖಾಸಗಿ ಆಸ್ಪತ್ರೆಗಳು ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ.