ನವದೆಹಲಿ, ಮಾ.13 (DaijiworldNews/PY) : 2017ರಲ್ಲಿ ಉತ್ತರಪ್ರದೇಶದ ಉನ್ನಾವೊದಲ್ಲಿ ಯುವತಿಯನ್ನು ಅತ್ಯಾಚಾರ ಗೈದಿದ್ದಲ್ಲದೆ, ಆಕೆಯ ತಂದೆಯನ್ನು ಹತ್ಯೆಗೈದ ಪ್ರಕರಣದ ಆರೋಪಿಯಾದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಇತರೆ ನಾಲ್ಕು ಮಂದಿ ಆರೋಪಿಗಳಿಗೆ ಮತ್ತೊಂದು ಪ್ರಕರಣದಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ದೆಹಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಅಪರಾಧ ಸಂಚು, ಅಕ್ರಮಬಂಧನ, ಹಲ್ಲೆ, ಉದ್ದೇಶವಲ್ಲದ ಮಾನವ ಹತ್ಯೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ವಿರುದ್ದ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಸಂತ್ರಸ್ತೆಯ ಕುಟುಂಬಕ್ಕೆ ಕುಲದೀಪ್ ಸಿಂಗ್ ಸಹೋದರ ಜೈದೀಪ್ ಅಲಿಯಾಸ್ ಅತುಲ್ ಸಿಂಗ್ ಇಬ್ಬರೂ ತಲಾ 10ಲಕ್ಷ ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಕುಲದೀಪ್ ಸಿಂಗ್, ಆತನ ಸಹೋದರ ಅತುಲ್ ಸಿಂಗ್, ಇಬ್ಬರು ಪೊಲೀಸರು ಸೇರಿದಂತೆ 7 ಮಂದಿಯ ನ್ಯಾಯಾಲಯ ವಿರುದ್ದ ಬುಧವಾರ ತೀರ್ಪು ಪ್ರಕಟಿಸಿದೆ.
2017ರಲ್ಲಿ 17 ವರ್ಷದ ಬಾಲಕಿಯನ್ನು ಆರೋಪಿ ಕುಲದೀಪ್ ಸಿಂಗ್ ಅಪಹರಿಸಿ ಅತ್ಯಾಚಾರ ಎಸಗಿದ್ದ. ಅದಲ್ಲದೇ, ಬಾಲಕಿಯ ತಂದೆಯನ್ನು ಅಕ್ರಮಬಂಧನದಲ್ಲಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಬಳಿಕ ಬಾಲಕಿಯ ತಂದೆ ಠಾಣೆಯಲ್ಲಿಯೇ ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ಈ ಸಾವಿನ ವಿರುದ್ದ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ.
ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಬಾಲಕಿಯ ತಂದೆಯ ಸಾವು ಈ ಎರಡೂ ಪ್ರಕರಣಗಳು ಪ್ರತ್ಯೇಕವಾಗಿ ದಾಖಲಾಗಿದ್ದವು.
ಉತ್ತರಪ್ರದೇಶದ ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯವು, ಉನ್ನಾವ್ ಅತ್ಯಾಚಾರ ಪ್ರಕರಣ ವಿಚಾರಣೆ ನಡೆಸಿ, 2019ರ ಡಿಸೆಂಬರ್ನಲ್ಲಿ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ನನ್ನು ಜೈಲಿಗೆ ಕಳುಹಿಸಿ ಆದೇಶಿಸಿದೆ. ಅಲ್ಲದೇ ಬಿಜೆಪಿ ಶಾಸಕನಾಗಿದ್ದ ಆರೋಪಿಯನ್ನು ಉತ್ತರ ಪ್ರದೇಶದ ವಿಧಾನಸಭಾ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ.