ಬೆಳಗಾವಿ, ಮಾ.13 (DaijiworldNews/PY) : "ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ ಬಣ ಕಾಂಗ್ರೆಸ್ ಪಕ್ಷದಲ್ಲಿರುವುದು ಸತ್ಯ. ಆದರೆ ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ಧಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಪ್ರಭಾವಿ ನಾಯಕರು, ಡಿ.ಕೆ.ಶಿ ಅವರು ಕಾಂಗ್ರೆಸ್ ಅಧ್ಯಕ್ಷರು. ಪ್ರಸ್ತುತ ಪಕ್ಷದಲ್ಲಿ ಮೂವರು ಕಾರ್ಯಾಧ್ಯಕ್ಷರಿದ್ಧಾರೆ. ದಲಿತ ಸಮುದಾಯದ ನಾಯಕರೊಬ್ಬರು ಕಾರ್ಯಾಧ್ಯಕ್ಷರಾಗಬೇಕು ಎನ್ನುವ ಬೇಡಿಕೆಯಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಮ್ಮುಖದಲ್ಲಿಯೇ ಪಕ್ಷವನ್ನು ಮುನ್ನಡೆಸುತ್ತೇನೆ" ಎಂದು ತಿಳಿಸಿದರು.
"ಟಿಕೆಟ್ಗಾಗಿ ಚುನಾವಣೆ ಸಂದರ್ಭದಲ್ಲಿ ಗುಂಪುಗಾರಿಕೆ ನಡೆಯುತ್ತದೆ. ಮನೆ ಎಂದ ಮೇಲೆ ಕೆಲವರಲ್ಲಿ ವೈಮನಸ್ಸು ಇರುವುದು ಸಹಜ. ಡಿ.ಕೆ.ಶಿ ಬಣ. ಸಿದ್ದರಾಮಯ್ಯ ಬಣ ಇರುವುದು ಸತ್ಯ. ಆದರರೆ, ಎಲ್ಲರೂ ಪಕ್ಷದ ವಿಚಾರ ಬಂದಾಗ ಒಂದಾಗುತ್ತೇವೆ. ಇನ್ನು ಚುನಾವಣೆಗೆ ಮೂರು ವರ್ಷ ಬಾಕಿ ಇದೆ. ಅಲ್ಲಿಯವರೆಗೆ ಪಕ್ಷವನ್ನು ಸಂಘಟಿಸಿ ಮರಳಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ" ಎಂಬುವುದಾಗಿ ಹೇಳಿದರು.
"ಬಹುದಿನಗಳಿಂದ ಎಲ್ಲರಲ್ಲೂ ಕಾತುರತೆಯಿತ್ತು. ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಚರ್ಚೆ ನಡೆದಿತ್ತು. ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ ಒಬ್ಬ ಅಧ್ಯಕ್ಷ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರಿಗೆ ಹುದ್ದೆಗೆ ಸಹಕಾರ ನೀಡಿದಕ್ಕಾಗಿ ಧನ್ಯವಾದ ಇಳಿಸುತ್ತೇನೆ. ಡಿ.ಕೆ.ಶಿ ಅವರಲ್ಲಿ ಉತ್ಸಾಹವಿದೆ. ಮೂವರು ಕಾರ್ಯಾಧ್ಯಕ್ಷರು ಕೆಪಿಸಿಸಿ ಅದ್ಯಕ್ಷರಿಗೆ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಸಹಕಾರ ನೀಡಯತ್ತೇವೆ" ಎಂದು ತಿಳಿಸಿದರು.
"ನಮಗೂ ಪರಿಶಿಷ್ಟ ಜಾತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಆಸೆ ಇದೆ. ಒಂದು ಹುದ್ದೆ ಇನ್ನೂ ಖಾಲಿಯಿದೆ. ಯಾವ ರೀತಿಯಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಗೋಕಾಕ ಸೇರಿದಂತೆ ಜಿಲ್ಲೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿದೆ. ಬಿಜೆಪಿ ಕಡೆ ಕಾಂಗ್ರೆಸ್ ಕಾರ್ಯಕರ್ತರು ಮುಖಮಾಡಿದ್ದಾರೆ. ಅದರಿಂದ ಯಾವುದೇ ನಷ್ಟವಾಗುವುದಿಲ್ಲ. ನಮ್ಮಶಕ್ತಿ ಪ್ರದರ್ಶನವನ್ನು ಉಪಚುನಾವಣೆಯಲ್ಲಿ ಮಾಡಿದ್ದೇವೆ. ಇನ್ನೂ ಮೂರು ವರ್ಷ ಕಾಲಾವಕಾಶವಿದೆ. ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಪಕ್ಷ ಬಲಪಡಿಸುವ ತಂತ್ರವಿದೆ" ಎಂದರು.
"ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯ ಮೇಲೆ ಚುನಾವಣೆ ಎದುರಿಸುವ ಬಗ್ಗೆ ಸ್ಥಳೀಯ ನಾಯಕರ, ಕಾರ್ಯಕರ್ತರ ಅಭಿಪ್ರಾಯ ಆಲಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.