ಬೆಂಗಳೂರು, ಮಾ.13 (DaijiworldNews/PY) : ಮಧ್ಯಪ್ರದೇಶದ ರೆಸಾರ್ಟ್ನಲ್ಲಿರುವ ಮಗನ ಭೇಟಿಗೆ ಅವಕಾಶ ಕಲ್ಪಿಸುವಂತೆ ನಾರಾಯಣ ಚೌಧರಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ ಅವರ ತಂಡದ ಜೊತೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಕಚೇರಿಯಲ್ಲಿ ಎಡಿಜಿಪಿ ಅಮರಕುಮಾರ ಪಾಂಡೆ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಕಚೇರಿಯಲ್ಲಿ ಎಡಿಜಿಪಿ ಅಮರಕುಮಾರ ಪಾಂಡೆ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಮಧ್ಯಪ್ರದೇಶ ಸಚಿವರಾದ ಜಿತು ಪಟ್ವಾರಿ, ಬಲರಾಮ್ ಚೌಧರಿ, ರಾಜ್ಯ ಬಿಜೆಪಿ ಸುಪರ್ದಿಯಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ ಮನೋಜ್ ಚೌಧರಿ ತಂದೆ ನಾರಾಯಣ್ ಚೌಧರಿ ಅವರು ಮನವಿ ಸಲ್ಲಿಸಿದ್ದು, ರೆಸಾರ್ಟ್ನಲ್ಲಿರುವ ಶಾಸಕರು ನಮ್ಮ ಪಕ್ಷದವರು. ಅಲ್ಲಿರುವ ಕೆಲವು ಬಿಜೆಪಿ ಶಾಸಕರು ನಮ್ಮ ಶಾಸಕರ ಭೇಟಿಗೆ ಅವಕಾಶ ನೀಡುತ್ತಿಲ್ಲ. ಇದಕ್ಕೆ ಪೊಲೀಸರು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.