ಬೆಂಗಳೂರು, ಮಾ13 ( Daijiworld News/MSP): ಕೊರೊನಾ ವೈರಸ್ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಾಂತ ಎಲ್ಲಾ ಥಿಯೇಟರ್, ಮಾಲ್, ಬಾರ್, ಪಬ್ ಒಂದು ವಾರಗಳ ಕಾಲ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆರೋಗ್ಯ ಸಚಿವರ, ವೈದ್ಯರು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಥಿಯೇಟರ್, ಮಾಲ್, ಬಾರ್, ಪಬ್ ಒಂದು ವಾರಗಳ ಮಟ್ಟಿಗೆ ಮುಚ್ಚುವಂತೆ ಮಾಡಲು ಆದೇಶಿಸಲಾಗಿದೆ. ಎಲ್ಲಾ ಮಾದರಿಯ ಕ್ರೀಡಾಕೂಟಗಳಿಗೂ ನಿಷಿದ್ಧ ಮಾಡಲಾಗಿದೆ. ರಾಜ್ಯಾಧ್ಯಂತ ಮದುವೆ, ನಿಶ್ಚಿತಾರ್ಥ ಹಾಗೂ ಯಾವುದೇ ರೀತಿಯ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ, ಮಾತ್ರವಲ್ಲದೇ ಮುಂದಿನ 15 ದಿನಗಳವರೆಗೆ ವಿದೇಶ ಪ್ರವಾಸಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ರಾಜ್ಯದ ವಿಶ್ವ ವಿದ್ಯಾಲಯಗಳಿಗೆ 1 ವಾರ ರಜೆ ಘೋಷಿಸಲಾಗಿದೆ.