ನವದೆಹಲಿ, ಮಾ.13 (DaijiworldNews/PY) : ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲು ಜಮ್ಮು-ಕಾಶ್ಮೀರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರವು 370ನೇ ವಿಶೇಷ ವಿಧಿ ರದ್ದುಗೊಳಿಸಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ತೀರ್ಮಾನವನ್ನು ತೆಗೆದುಕೊಂಡ ಸಂದರ್ಭದಲ್ಲಿ ಫಾರೂಕ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿಡಲಾಗಿತ್ತು. 2019 ಆಗಸ್ಟ್ 4 ರಿಂದ ಇಲ್ಲಿಯವರೆಗೆ ಏಳು ತಿಂಗಳು ಫಾರೂಕ್ ಅಬ್ದುಲ್ಲಾ ಅವರು ಬಂಧನದಲ್ಲಿದ್ದರು.
ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿತ್ತು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಫಾರೂಕ್ ಅಬ್ದುಲ್ಲಾ ಸೇರಿದಂತೆ, ಓಮರ್ ಅಬ್ದುಲ್ಲಾ , ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರನ್ನು ಬಂಧಿಸಲಾಗಿತ್ತು.
ವಿಪಕ್ಷಗಳು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದವು. ಅಲ್ಲದೇ, ಜಮ್ಮು-ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಹಾಗೂ ಇತರ ನಾಯಕರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದ ವಿಪಕ್ಷಗಳ ಹೇಳಿಕೆಯನ್ನು ಸೋಮವಾರ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಟ್ವೀಟ್ ಮಾಡಿದ್ದರು.
ಒತ್ತಾಯಪೂರ್ವಕವಾಗಿ ಮೋದಿ ಸರ್ಕಾರವು ಪ್ರಜಾಪ್ರಭುತ್ವವಾದಿಗಳ ಬಾಯಿಮುಚ್ಚಿಸುತ್ತಿದೆ ಎಂದು ವಿಪಕ್ಷಗಳು ಹೇಳಿದ್ದವು. ಸುದೀರ್ಘ ಕಾಲ ಫಾರೂಕ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿಡುವ ಮೂಲಕ ಕಾಶ್ಮೀರದ ಪ್ರಾತಿನಿಧ್ಯವನ್ನು ಕೇಂದ್ರ ಸರ್ಕಾರ ಅವಮಾನಿಸುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ತಿಳಿಸಿತ್ತು.
ಜಮ್ಮು-ಕಾಶ್ಮೀರದ ನಾಗರಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಬಂಧಿತರಾಗಿದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲು ಶುಕ್ರವಾರ ಶ್ರೀನಗರದ ಜಿಲ್ಲಾ ಮೆಜಿಸ್ಟ್ರೇಟ್ ಆದೇಶ ನೀಡಿದ್ದಾರೆ.