ಮುಂಬೈ , ಮಾ.13 (DaijiworldNews/PY) : ಕೊರೊನಾ ವೈರಸ್ ಹರಡುವ ಆತಂಕದ ಹಿನ್ನೆಲೆ ಏರ್ ಇಂಡಿಯಾ ವಿಮಾನ ಸೇವೆಯನ್ನು ಇಟಲಿ, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಕೊರಿಯಾ, ಶ್ರೀಲಂಕಾ ದೇಶಗಳಿಗೆ ರದ್ದು ಮಾಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾ ಈ ತೀರ್ಮಾನವನ್ನು ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಣೆಯಾದ ಬೆನ್ನಲ್ಲೇ ತೆಗೆದುಕೊಂಡಿತ್ತು. ಈ ದೇಶಗಳಿಗೆ ಎ.30ರವರೆಗೂ ಸೇವೆ ರದ್ದು ಮಾಡಲಾಗಿದೆ.
ಇದಕ್ಕೂ ಮೊದಲು ಇಟಲಿ, ಫ್ರಾನ್ಸ್ ಸೇರಿ ಯುರೋಪಿಯನ್ ದೇಶಗಳಿಗೆ ಚಾಲನೆಯಲ್ಲಿದ್ದ ವಿಮಾನ ಹಾರಾಟದ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ಕೊರೊನಾ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ ನಂತರ ಇಟಲಿ, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಕೊರಿಯಾ, ಶ್ರೀಲಂಕಾಕ್ಕೆ ಹಾರಾಟ ರದ್ದು ಮಾಡಿದೆ.
ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್, ಇಸ್ರೇಲ್, ದಕ್ಷಿಣ ಕೊರಿಯಾದಲ್ಲಿ ಏಕಾಏಕಿ ಕೊರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ಈ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಲ್ಲಿ ಸೋಂಕು ಹೆಚ್ಚು ಕಂಡುಬಂದಿದೆ. ಹಾಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥರು ಹೇಳಿದ್ದಾರೆ.
ಮಾ.13ರಿಂದ ಎ.15ರವರೆಗೆ ರಾಜತಾಂತ್ರಿಕ ಹಾಗೂ ಕೆಲವು ವಿಭಾಗಗಳನ್ನು ಹೊರತುಪಡಿಸಿ ಎಲ್ಲಾ ಮಾದರಿ ವೀಸಾಗಳನ್ನು ಅಮಾನತುಗೊಳಿಸಲು ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು.