ಬೆಂಗಳೂರು, ಮಾ 13 (DaijiworldNews/SM): ಜಿಲ್ಲಾ ಮಟ್ಟದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆನ್ನುವ ಮೂಲಕ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸರಕಾರದ ಗಮನ ಸೆಳೆದಿದ್ದಾರೆ.
ವಿಧಾನಮಂಡಲದ ಅಧಿವೇಶನದಲ್ಲಿ ನಮ್ಮ ರಾಜ್ಯದಲ್ಲಿರುವಂತಹ ಕೈಗಾರಿಕೆಗಳಿಗೆ ರಾಜ್ಯದ ಹಾಗೂ ಸ್ಥಳೀಯ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ದೊರಕಿಸಲು ಪ್ರಯತ್ನಿಸಿದರೆ ಉತ್ತಮ. ಕೈಗಾರಿಕೆಗಳು ಉದ್ಯೋಗದಲ್ಲಿ ಸ್ಥಳೀಯರಿಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಆದ್ಯತೆ ನೀಡಬೇಕು ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಸರಕಾರದ ಗಮನ ಸೆಳೆದರು.
ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಸ್ಥಾಪಿಸಲಾಗುತ್ತಿರುವ ವಿವಿಧ ಕೈಗಾರಿಕೆಗಳು ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದಕಷ್ಟೆ ಸೀಮಿತವಾಗಿದ್ದು, ಸ್ಥಳೀಯರಿಗೆ ಅತ್ಯಂತ ಕಡಿಮೆ ಉದ್ಯೋಗಾವಕಾಶಗಳು ದೊರೆಯುತ್ತಿದೆ. ಇದರ ಕಡೆಗೆ ಸರಕಾರ ಗಮನ ಹರಿಸಿ ರಾಜ್ಯ ಹಾಗೂ ಆಯಾಯ ಜಿಲ್ಲೆಯ ಜನರಿಗೆ ಪ್ರಾಧಾನ್ಯತೆ ನೀಡಬೇಕು. ಈ ಕುರಿತಾಗಿ ಕಾನೂನು ರಚಿಸಬೇಕು ಎಂದು ಸರಕಾರವನ್ನು ಅಗ್ರಹಿಸಿದರು.
ಉದ್ಯೋಗದ ಕುರಿತು ಚರ್ಚಿಸುತ್ತ, ಉದ್ಯೋಗ ಸೃಷ್ಟಿಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮತ್ತು ಆ ಭಾಗದ ಜಿಲ್ಲೆಯ ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇವೆ ಎಂಬ ಕಾನೂನು ರೂಪಿಸಬೇಕಾಗಿದೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಂಆರ್ಪಿಎಲ್ ಹಾಗೂ ಒಎನ್ಜಿಸಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು ಇದರಲ್ಲಿ ಕನಿಷ್ಠ ಶೇ. 2 ರಷ್ಟು ಈ ಭಾಗದ ಜನರಿಗೆ ಉದ್ಯೋಗ ಲಭಿಸಿಲ್ಲ. ಅಲ್ಲಿರುವ ಎಲ್ಲಾ ಉದ್ಯೋಗಿಗಳು ಹೊರರಾಜ್ಯದವರೇ ಆಗಿದ್ದಾರೆ. ಹಾಗಾಗಿ ಇಂತಹ ಕ್ಷೇತ್ರದಲ್ಲಿ ಸ್ಥಳೀಯರಿಗೆ ಅಥವಾ ಆ ಭಾಗದ ಜಿಲ್ಲೆಯ ಜನತೆಗೆ ಹಾಗೂ ಕರ್ನಾಟಕ ರಾಜ್ಯದ ಯುವಕ ಯುವತಿಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸದನದಲ್ಲಿ ಅವರು ಪ್ರಸ್ತಾಪಿಸಿದರು.