ಭೋಪಾಲ್, ಮಾ. 14 (Daijiworld News/MB) : ವಿಧಾನಸಭೆಯಲ್ಲಿ ನನ್ನ ಸರ್ಕಾರ ಬಹುಮತ ಹೊಂದಿದ್ದು ಅದನ್ನು ಸಾಬೀತುಪಡಿಸಲು ಸಿದ್ಧ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಶುಕ್ರವಾರ ಹೇಳಿದ್ದಾರೆ.
ಹಾಗೆಯೇ ಮಾರ್ಚ್ 16ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು ಇದೇ ಅವಧಿಯಲ್ಲಿ ಸಭಾಧ್ಯಕ್ಷರು ನಿಗದಿಪಡಿಸಿದ ದಿನಾಂಕದಂದು ಬಹುಮತ ಸಾಬೀತಿಗೆ ಸಿದ್ಧ ಎಂದೂ ತಿಳಿಸಿದ್ದಾರೆ.
ರಾಜ್ಯದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಭೇಟಿಯಾದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಅಪಹರಿಸಿದ್ದಾರೆ. ಬಿಜೆಪಿ ನಾಯಕರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಮೂರು ಪುಟಗಳ ಪತ್ರವನ್ನೂ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.
ನಮ್ಮ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ ಕೂಡಿ ಹಾಕಲಾಗಿದೆ. ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಒತ್ತಡ ಹಾಕಲು ಪತ್ರದಲ್ಲಿ ಹೇಳಲಾಗಿದೆ.
ಮಧ್ಯಪ್ರದೇಶದ ಆರು ಸಚಿವರು ಸೇರಿದಂತೆ ಕಾಂಗ್ರೆಸ್ನ ಹತ್ತೊಂಬತ್ತು ಮಂದಿ ಬಂಡಾಯ ಶಾಸಕರು ಬೆಂಗಳೂರಿನಿಂದ ಭೋಪಾಲ್ಗೆ ವಾಪಸಾಗುವ ನಿರ್ಧಾರದಿಂದ ಶುಕ್ರವಾರ ಹಿಂದೆ ಸರಿದಿದ್ದಾರೆ.
ಎಲ್ಲ ಬಂಡಾಯ ಶಾಸಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ, ಲಾಠಿ ಹಿಡಿದು ಭೋಪಾಲ್ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾದುಕುಳಿತಿದ್ದರು. ಆದ್ದರಿಂದ ಕೊನೇ ಹಂತದಲ್ಲಿ ಸುರಕ್ಷತೆ ಕಾರಣಗಳಿಂದ ವಾಪಸಾಗುವ ನಿರ್ಧಾರ ಕೈಬಿಡಲಾಯಿತು ಎಂದು ಜೋತಿರಾದಿತ್ಯ ಸಿಂಧಿಯಾ ಆಪ್ತ ಮತ್ತು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಪಂಕಜ್ ಚತುರ್ವೇದಿ ಹೇಳಿದ್ದಾರೆ.
ಈ ಬಂಡಾಯ ಶಾಸಕರು ಶುಕ್ರವಾರ ಸಂಜೆ ಬೆಂಗಳೂರಿನಿಂದ ಭೋಪಾಲ್ಗೆ ಹಿಂದಿರುಗಳಿದ್ದರು. ಬಂಡಾಯ ಶಾಸಕರು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೃಶ್ಯಗಳನ್ನು ಕೆಲ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು. ಮುಖ್ಯಮಂತ್ರಿ ಕಮಲನಾಥ್ ಅವರ ಶಿಫಾರಸಿನ ಮೇಲೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಬೆಂಗಳೂರಿನಲ್ಲಿರುವ ಆರು ಮಂದಿ ಸಚಿವರನ್ನು ಸಚಿವ ಸಂಪುಟದಿಂದ ಶುಕ್ರವಾರ ವಜಾಗೊಳಿಸಿದ್ದಾರೆ.