ನವದೆಹಲಿ, ಮಾ 14( Daijiworld News/MSP): ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿಯುತ್ತಿದ್ದಂತೆ, ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಿಸಿದೆ.
ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿ, ಪೆಟ್ರೊಲ್ ಗಳ ಬೆಲೆ ಇಳಿಕೆಯಾದ ಕೆಲವು ದಿನಗಳಲ್ಲಿ ಕೇಂದ್ರ ಸರ್ಕಾರ ಅವುಗಳ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 2 ರೂ.ನಿಂದ 8 ರೂ. ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 4 ರೂ. ಹೆಚ್ಚಳ ಮಾಡಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೊರೊನಾ ವೈರಸ್ ಪರಿಣಾಮ ತೈಲದ ಬೇಡಿಕೆ ಕುಸಿದಿದೆ. ಇದರಿಂದಾಗಿ ತೈಲ ಬೆಲೆಯೂ ಇಳಿಕೆಯಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಏರಿಸಿದ್ದು ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 3 ರೂಪಾಯಿ ಏರಿಕೆಯಾಗಿದೆ.
ಮಾರ್ಚ್ 11 ರಂದು ಪೆಟ್ರೋಲ್ ಬೆಲೆ ಲೀಟರ್ ಗೆ 2.69 ರೂ. ಇಳಿಕೆಯಾಗಿ 70.29 ರೂ. ತಲುಪಿತ್ತು. ಡೀಸೆಲ್ ಬೆಲೆ 2.33 ರೂಪಾಯಿ ಕುಸಿದು 63.01 ರೂ. ತಲುಪಿತ್ತು.