ಕಲಬುರಗಿ, ಮಾ. 14 (Daijiworld News/MB) : "ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ ವ್ಯಕ್ತಿ ಮೊಹಮ್ಮದ್ ಹುಸೇನ್ ಸಿದ್ಧಿಕಿ (76) ರ ಸಂಪರ್ಕದಲ್ಲಿದ್ದ ಹಿನ್ನಲೆಯಲ್ಲಿ 71 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಈ ಪೈಕಿ ನಾಲ್ವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು ಅವರನ್ನು ಇಎಸ್ಐ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದರು.
ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಶುಕ್ರವಾರದವರೆಗೂ ಕುಟುಂಬದವರು ಹಾಗೂ ಆಸ್ಪತ್ರೆಯ ನಾಲ್ವರನ್ನು ಸೇರಿ ಒಟ್ಟು 46 ಜನರ ಮೇಲೆ ನಿಗಾ ವಹಿಸಲಾಗುತ್ತಿತ್ತು. ಈಗ ಸೋಂಕಿತರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅವರನ್ನೂ ಮನೆಯಲಿರಿಸಿ ನಿಗಾ ವಹಿಸಲಾಗುತ್ತಿದೆ. ಈ ನಾಲ್ವರಲ್ಲಿ ಐದು ವರ್ಷದ ಮಗು ಕೂಡಾ ಸೇರಿದೆ" ಎಂದು ಹೇಳಿದರು.
ಹಾಗೆಯೇ "ಈ ಪೈಕಿ ಕೊರೊನಾ ವೈರಸ್ ಶಂಕಿತ ನಾಲ್ವರ ರಕ್ತ, ಕಫದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್ ಕಳುಹಿಸಲಾಗಿದೆ. ಅದರ ವರದಿ ಇನ್ನಷ್ಟೇ ಬರಬೇಕಾಗಿದೆ" ಎಂದು ತಿಳಿಸಿದರು.
"ಮೃತ ವ್ಯಕ್ತಿಯ ನೇರ ಸಂಪರ್ಕ ಹಾಗೂ ಸಂಪರ್ಕದಲ್ಲಿದ್ದವರ ಸಂಪರ್ಕ ಹೊಂದಿದ್ದವರ ಪತ್ತೆ ಹಚ್ಚಲಾಗುತ್ತಿದೆ. ಆದರೆ, ಕೊರೊನಾ ಸೋಂಕಿನ ಭಯದಿಂದಾಗಿ ಮೃತನ ಕುಟುಂಬಸ್ಥರು ಹಾಗೂ ಆತನ ಸಂಪರ್ಕದಲ್ಲಿ ಇದ್ದರು ಸರಿಯಾದ ಮಾಹಿತಿ ನೀಡುತ್ತಿಲ್ಲ" ಎಂದು ಜಿಲ್ಲಾಧಿಕಾರಿ ಹೇಳಿದರು.
ಹಾಗೆಯೇ ಕೊರೊನಾ ಕುರಿತಾಗಿ ವರದಿ ಮಾಡಲು ತೆರಳಿದ್ದ ಮೂವರು ಟಿವಿ ವರದಿಗಾರರನ್ನು ನಿಗಾದಲ್ಲಿ ಇರಿಸುವಂತೆ ಜಿಲ್ಲಾಧಿಕಾರಿ ಶರತ್ ಬಿ ಸೂಚಿಸಿದ್ದಾರೆ.
ಕೊರೊನಾದಿಂದಾಗಿ ಮೃತ ಪಟ್ಟಿರುವ ವ್ಯಕ್ತಿ ಜೀವಂತವಾಗಿ ಸಂದರ್ಭದಲ್ಲಿ ಅವರೊಂದಿಗೆ ಹಾಗೂ ಅವರ ಪುತ್ರನೊಂದಿಗೆ ಸಂದರ್ಶನ ಮಾಡಿದ್ದರಿಂದಾಗಿ ಸೋಂಕಿ ತಗಲಿರುವ ಶಂಕೆಯಿಂದಾಗಿ ಜಿಲ್ಲಾಧಿಕಾರಿ ಈ ಆದೇಶವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೂವರು ವರದಿಗಾರರನ್ನು 14 ದಿನಗಳ ಕಾಲ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲು ಹೇಳಲಾಗಿದ್ದು, ಸುದ್ದಿಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಇರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.