ಶಿವಮೊಗ್ಗ , ಮಾ.14 (DaijiworldNews/PY) : "ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಲೆಲ್ಲಾ ಜಿಲ್ಲೆಗೆ ಒಂದಲ್ಲಾ ಒಂದು ತೊಂದರೆಯಾಗುತ್ತದೆ" ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಶಿವಮೊಗ್ಗದಲ್ಲಿ ವಿದ್ಯುತ್ ಕೊರತೆ ತುಂಬಾ ಕಾಡುತ್ತಿದೆ. ಇದು ರೈತರಿಗೆ ಸಮಸ್ಯೆಯಾಗುತ್ತಿದ್ದು, ಟಿಸಿ ಹೋಗಿದ್ದರೆ ಒಂದು ವಾರವಾದರೂ ಟಿಸಿ ಬದಲಾಯಿಸುವುದಿಲ್ಲ. ಆದರೆ, ಶಿಕಾರಿಪುರ ತಾಲೂಕಿನಲ್ಲಿ ಮಾತ್ರ ನಿರಂತರ ವಿದ್ಯುತ್ ಇರುತ್ತದೆ. ಬಿಎಸ್ವೈ ಅವರು ರಾಜ್ಯಕ್ಕೆ ಮುಖ್ಯಮಂತ್ರಿ. ಕೇವಲ ಶಿಕಾರಿಪುರಕ್ಕೆ ಮಾತ್ರ ಅಲ್ಲ. ಬಿಎಸ್ವೈ ಅವರು ಸಿಎಂ ಆದಾಗಲೆಲ್ಲಾ ಜಿಲ್ಲೆಗೆ ಒಂದಲ್ಲಾ ಒಂದು ಸಮಸ್ಯೆಯಾಗುತ್ತದೆ" ಎಂದು ಹೇಳಿದರು.
"ಜಿಲ್ಲೆಯನ್ನು ಕೊರೊನಾ ರೀತಿಯಲ್ಲಿ ಮಂಗನಕಾಯಿಲೆ ಕಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿಯವರೆಗೆ ಕ್ರಮ ತೆಗೆದುಕೊಂಡಿಲ್ಲ" ಎಂದು ತಿಳಿಸಿದರು.
ಶಾಸಕ ಹರತಾಳು ಹಾಲಪ್ಪ ಅವರ ವಿರುದ್ದ ವ್ಯಂಗ್ಯವಾಡಿದ ಬೇಳೂರು ಅವರು, "ಸೊರಬದಲ್ಲಿದ್ದ ಮಂಗನಕಾಯಿಲೆ ಈಗ ನಮ್ಮ ಸಾಗರಕ್ಕೂ ಬಂದಿದೆ. ಅಲ್ಲಿಂದ ಸಾಗರದ ಶಾಸಕರು ಇಲ್ಲಿಗೆ ಬಂದ ಕಾರಣ ಮಂಗನಕಾಯಿಲೆ ಬಂದಿದೆ" ಎಂದರು.
"ಮಂಕಿ ಪಾರ್ಕ್ ಮಾಡುತ್ತೇವೆ ಎಂದು ಶಿವಮೊಗ್ಗ ಶಾಸಕರು ಹೇಳಿದ್ದರು. ಆದರೆ, ಸಂಸದ ರಾಘವೇಂದ್ರ ಅವರು ಅದರ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ಮಂಕಿ ಪಾರ್ಕ್ ಆದಷ್ಟು ಬೇಗ ಮಾಡಿ, ಹಾಲಪ್ಪ ಅವರನ್ನು ಇನ್ಚಾರ್ಜ್ ಮಾಡಿ" ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಆಯ್ಕೆ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಹೊಸ ಬದಲಾವಣೆಯಾಗುತ್ತದೆ" ಎಂದರು.