ಕಲಬುರ್ಗಿ,ಮಾ 14( Daijiworld News/MSP): ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕೆಲಸ - ಕಾರ್ಯಗಳನ್ನು ಹೊರತು ಪಡಿಸಿ ಯಾರೂ ಮನೆಯಿಂದ ಹೊರಬಾರದೆಂದು ಜಿಲ್ಲಾಧಿಕಾರಿ ಶರತ್ ಬಿ.ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಅನಗತ್ಯವಾಗಿ ಪ್ರಯಾಣ ಮಾಡುವುದು ಮುಂದೂಡಿ. ಗುಂಪುಗುಂಪಾಗಿ ಸೇರುವುದು, ಜನದಟ್ಟನೆ ಪ್ರದೇಶದಲ್ಲಿ ಹೋಗುವುದನ್ನು ನಿಯಂತ್ರಿಸಿಕೊಳ್ಳಬೇಕು.ಸಾಧ್ಯವಾದರೆ ಧಾರ್ಮಿಕ ಕಾರ್ಯಗಳನ್ನು ಮುಂದೂಡಬೇಕು. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮದುವೆ-ಮುಂಜಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮುನ್ನ ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ. ಅಗತ್ಯ ವಸ್ತುಗಳ ಪೂರೈಕೆಗೆ ವಿಶೇಷವಾಗಿ ದಿನಸಿ ಅಂಗಡಿಗಳು, ಹಾಲು, ಆಸ್ಪತ್ರೆ ಮೆಡಿಕಲ್ ಇನ್ನಿತರ ವಸ್ತುಗಳಿಗೆ ಪೂರೈಕೆಗೆ ಯಾವುದೇ ತೊಂದರೆಯಿಲ್ಲ. ಆದರೆ ಬಟ್ಟೆ ಅಂಗಡಿ, ಮದ್ಯ ಅಂಗಡಿ ಇನ್ನಿತರ ತೀರಾ ಅವಶ್ಯಕವಿಲ್ಲದ ವಸ್ತುಗಳ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
ಹೋಮ್ ಐಸೋಲೇಷನ್ ನಲ್ಲಿರುವ ಎಲ್ಲಾ ವ್ಯಕ್ತಿಗಳಿಗೆ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ವಿತರಣೆ ಮಾಡಿದಂತೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುವುದು.ಜಿಲ್ಲೆಯೊಳಗಿನ ಸಾರಿಗೆ ವ್ಯವಸ್ಥೆಯನ್ನು ಕನಿಷ್ಠ ಗೊಳಿಸಲಾಗುವುದು ಎಂದು ಹೇಳಿದರು
ಜಿಲ್ಲೆಗೆ ಹೊರ ಜಿಲ್ಲೆಯಿಂದ ಮತ್ತು ಹೊರ ರಾಜ್ಯದಿಂದ ಬರುವವರು ಸಾಧ್ಯವಾದ ದಿನಗಳ ಮಟ್ಟಿಗೆ ಪ್ರಯಾಣ ಮುಂದೂಡಬೇಕು.ಸರ್ಕಾರಿ ಸೇವೆಗಳಾದ ಪಹಣಿ ವಿತರಣೆ, ನೊಂದಣಿ, ಆರ್ ಟಿ ಓ ಸೇವೆ ಸೇರಿದಂತೆ ಇನ್ನಿತರ ಸಾರ್ವಜನಿಕರ ಸೇವೆ ನೀಡುವ ಇಲಾಖೆಗಳಲ್ಲಿ ಈ ಸೇವೆಗಳ ಪೂರೈಕೆ ಮುಂದಿನ ಆದೇಶದವರಿಗೆ ಸ್ಥಗಿತಗೊಳಿಸಲಾಗಿದೆ.ರಸ್ತೆ ಬದಿ ಅಂಗಡಿ ಮುಂಗಟ್ಟುಗಳು ಬಂದ್ ಇರಲಿವೆ. ಬೀದಿ ಬದಿಯಲ್ಲಿನ ತಿಂಡಿ ತಿನಿಸುಗಳ ಮಾರಾಟ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ದಿನನಿತ್ಯ ಅಗತ್ಯ ವಸ್ತುಗಳ ಖರೀದಿಗಾಗಿ ಮನೆಯಿಂದ ಒಬ್ಬರು ಮಾತ್ರ ಹೊರಬರಬಹುದು ಎಂದು ಹೇಳಿದ ಅವರು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಡಾ.ಪಿ.ರಾಜಾ,ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ,ಡಿಸಿಪಿ ಕಿಶೋರ್ ಬಾಬು ಹಾಜರಿದ್ದರು.