ಕೇರಳ, ಮಾ.14 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ನಿಂದ ಚೇತರಿಸಿಕೊಳ್ಳುತ್ತಿದ್ದ ಕೇರಳದಲ್ಲಿ ಇದೀಗ ಹಕ್ಕಿ ಜ್ವರ ಅಲ್ಲಿನ ಜನರನ್ನು ಆತಂಕಗೊಳಿಸಿದ್ದು, ಹಕ್ಕಿಜ್ವರ ಕಾಣಿಸಿಕೊಂಡ ಸ್ಥಳದ 1 ಕಿಲೋ ಮೀಟರ್ ಸುತ್ತಮುತ್ತಲಿನ ಕೋಳಿಫಾರಂ, ಕೋಳಿ ಮೊಟ್ಟೆ, ಪಾರಿವಾಳ ಸೇರಿದಂತೆ ಇತರೆ ಪಕ್ಷಿಗಳನ್ನು ನಾಶಪಡಿಸಲು ಸರ್ಕಾರ ಆದೇಶ ಹೊರಡಿಸಿದೆ.
ಎರಡು ಹಕ್ಕಿ ಪ್ರಕರಣಗಳು ಮಲ್ಲಪುರಂನ ಪರಪ್ಪನಂಗಡಿಯಲ್ಲಿ ಪತ್ತೆಯಾಗಿವೆ. ಈ ಕಾರಣದಿಂದಾಗಿ, ಈ ಪ್ರದೇಶದ ಸುತ್ತಮುತ್ತಲಿನ ಕೋಳಿಫಾರಂಗಳಲಿದ್ದ ಕೋಳಿಗಳನ್ನು ನಾಶಮಾಡಲಾಗಿದೆ.
10 ತಂಡಗಳನ್ನು ನಾಶಗೊಳಿಸುವ ಕಾರ್ಯಕ್ಕೆ ಸ್ಥಳೀಯ ಆರೋಗ್ಯಾಧಿಕಾರಿಗಳು ನಿಯೋಜಿಸಿದ್ದಾರೆ. ಎಲ್ಲಾ ಕೋಳಿಫಾರಂಗಳನ್ನು ಈ ತಂಡಗಳು ತಪಾಸಣೆ ಮಾಡಿ ನಾಟಿ ಕೋಳಿಗಳು, ಪಾರಿವಾಳಗಳು, ಕೋಳಿಗಳು, ಮೊಟ್ಟೆಗಳನ್ನು ಪತ್ತೆ ಹಚ್ಚಿ ಅವುಗಳ ಗೂಡುಗಳನ್ನೂ ನಾಶಪಡಿಸುತ್ತಿದ್ದಾರೆ.
ಕೇರಳ ಆರೋಗ್ಯ ಅಧಿಕಾರಿಗಳು ಕಟ್ಟು ನಿಟ್ಟಾದ ಕ್ರಮ ತೆಗೆದುಕೊಳ್ಳುತ್ತಿದ್ದು, ಹಕ್ಕಿ ಜ್ವರ ಎಲ್ಲೆಲ್ಲಿ ಪತ್ತೆಯಾಗಿದೆಯೋ ಆ ಪ್ರದೇಶಗಳ ಸುತ್ತಮುತ್ತಲಿನ ಕೋಳಿಫಾರಂಗಳನ್ನು ನಾಶಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ಕರ್ನಾಟಕ-ಕೇರಳ ಗಡಿಭಾಗವಾದ ಮಡಿಕೇರಿ, ಕಾಸರಗೋಡು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದೆ.
ಹಕ್ಕಿಜ್ಚರ ಭೀತಿಯಿಂದ ಚಿಕನ್ ತಿನ್ನುವುದನ್ನು ಜನರು ಕಡಿಮೆ ಮಾಡಿರುವ ಕಾರಣ ಕೋಳಿ ದರ ಕರ್ನಾಟಕದಲ್ಲಿ ತೀರ ಕಡಿಮೆಯಾಗಿದೆ. ಕೋಳಿ ಸಾಕಾಣಿಕೆದಾರರು ಇದರಿಂದಾಗಿ ನಷ್ಟ ಅನುಭವಿಸುತ್ತಿದ್ದು, ರಾಜ್ಯದ ಕೋಳಿ ಸಾಕಾಣಿಕೆದಾರನೊಬ್ಬ ನಷ್ಟ ಅನುಭವಿಸಿದ ಕಾರಣದಿಂದ ಕೋಳಿಗಳನ್ನು ಗುಂಡಿ ತೆಗೆದು ಹೂತು ಹಾಕಿರುವ ವಿಡಿಯೋ ವೈರಲ್ ಆಗಿತ್ತು.