ಹೈದರಾಬಾದ್, ಮಾ.14 (DaijiworldNews/PY) : ತನ್ನ ಹಿರಿಯ ಮಗಳ ಆತ್ಮಹತ್ಯೆಗೆ ಸಹಾಯ ಮಾಡಿದ ಆರೋಪದ ಹಿನ್ನೆಲೆ, ತನ್ನ 17 ವರ್ಷದ ಕಿರಿ ಮಗಳು ನೀಡಿದ ದೂರಿನ ಆಧಾರದ ಮೇಲೆ ಮಹಿಳೆಯೋರ್ವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ನೀಡಿರುವ ಮಾಹಿತಿಗಳ ಪ್ರಕಾರ, ಹುಡುಗಿಯ ತಾಯಿಯು ತಮ್ಮ ತಂದೆಯಿಂದ ಬೇರೆಯಾಗಿದ್ದು, ಬಳಿಕ ಒಂದು ವರ್ಷದಲ್ಲಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ತಿಳಿಸಲಾಗಿದೆ.
ಆರೋಪಿ ಮಹಿಳೆಯ ವಿರುದ್ದ ಐಪಿಸಿ ಸೆಕ್ಷನ್ 306 ಹಾಗೂ 420ರಡಿ ಪ್ರಕರಣ ದಾಖಲಾಗಿದೆ. ಬಾಲಕಿಯ ದೂರಿನ ಪ್ರಕಾರ, ತಾಯಿಯು ಅನಿತಾ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದು ಹಾಗೂ ಪೆರಮ್ ನವೀನ್ ಕುಮಾರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಅಲ್ಲದೇ ಅವರು ಆಗಾಗ ಮನೆಗೆ ಭೇಟಿ ನೀಡುತ್ತಿದ್ದರು ಎಂದು ತಿಳಿಸಿದ್ದಾಳೆ.
ಆ ವ್ಯಕ್ತಿಯೊಂದಿಗೆ ತನ್ನ ಸಂಬಂಧ ಮುಂದುವರೆಸಲು ಆಕೆ ತನ್ನ ಹಿರಿಯ ಮಗಳನ್ನು ಆತನೊಂದಿಗೆ ವಿವಾಹ ಮಾಡಿಸಿದ್ದಳು. ಈ ಕಾರಣಗಳಿಂದ ಬೇಸತ್ತಿದ್ದ 19 ವರ್ಷದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದಾಗಿ ಕಿರಿಯ ಮಗಳು ಹೇಳಿದ್ದಾಳೆ. ಮೀರ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಮೃತಪಟ್ಟ ಮಹಿಳೆ ಹೈದರಾಬಾದ್ನಲ್ಲಿರುವ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದಳು. ಮದುವೆಯಾದ ನಂತರವೂ ತನ್ನ ಪತಿ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ವಿಚಾರವನ್ನು ತಿಳಿದಿದ್ದ ಆಕೆಯನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಮನೆಯಿಂದ ಹೊರಹೋಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ಕಿರಿಯ ಮಗಳು ಪೊಲೀಸರಿಗೆ ತಿಳಿಸಿದ್ಧಾಳೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆಕೆಯ ತಾಯಿ, ನಮ್ಮಿಬ್ಬರನ್ನು ಬೇರ್ಪಡಿಸಲು ನೋಡಿದರೆ ನಾನು ಸಾಯುವುದಾಗಿ ಹೆದರಿಸಿದ್ಧಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ವರದಿಯ ಪ್ರಕಾರ, ಈ ವಿಚಾರದ ಬಗ್ಗೆ ಮೃತ ಮಹಿಳೆಗೆ ಹಾಗೂ ಆಕೆಯ ಪತಿಗೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಆಕೆ ಪತ್ರ ಬರೆದಿಟ್ಟು, ಸೀರೆಯಿಂದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ. ತನಗೆ ನ್ಯಾಯ ದೊರಕಬೇಕು ಎಂದು ಡೆತ್ ನೋಟ್ನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ತನಿಖೆ ಆರಂಭಿಸಿದ್ಧಾರೆ.