ಬೆಂಗಳೂರು , ಮಾ.14 (DaijiworldNews/PY) : ಕೊರೊನಾ ಸೋಂಕು ದೇಶದಲ್ಲಿ ಹೆಚ್ಚುತ್ತಿದ್ದು, ಈ ಹಿನ್ನೆಲೆ, "ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು. ಅದನ್ನು ಎಲ್ಲಾ ರಾಜ್ಯಗಳಿಗೂ ಅನುಷ್ಠಾನ ಮಾಡಬೇಕು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದಾರೆ. ಅದೇ ರೀತಿಯಲ್ಲೂ ಇಲ್ಲಿಯೂ ಮಂಡನೆ ಆಗಬೇಕು. ಕೇಂದ್ರ ಸರ್ಕಾರ ಕೊರೊನಾ ವಿಚಾರದಲ್ಲಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೊರೊನಾ ನಿಯಂತ್ರಿಸಲು ಕ್ರಮಕೈಗೊಂಡಿಲ್ಲ" ಎಂದು ತಿಳಿಸಿದರು.
"ರಾಜ್ಯದಲ್ಲಿ ಹೊರಗಿನಿಂದ ಬಂದವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಎಲ್ಲೂ ಸ್ಥಳೀಯರಿಗೆ ಬಂದಿಲ್ಲ. ಮಾಧ್ಯಮಗಳು ಹಾಗಾಗಿ ವಾಸ್ತವ ತೋರಿಸಬೇಕು. ಈಗಾಗಲೇ ಜನರು ಭಯಗೊಂಡಿದ್ದಾರೆ. ವಾಸ್ತವ ಜಾಗೃತಿ ಬಗ್ಗೆ ವರದಿ ಮಾಡಿ, ಜನರನ್ನು ಭಯಬೀಳಿಸುವುದು ಬೇಡ" ಎಂದು ಹೇಳಿದರು.