ಬಳ್ಳಾರಿ/ಉಡುಪಿ, ಮಾ 14 ( Daijiworld News/MSP) : ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ ಹಲವು ಪ್ರವಾಸಿ ಪ್ರವಾಸಿ ತಾಣ, ಧಾರ್ಮಿಕ ಕೇಂದ್ರ ಗಳಿಗೆ ಭಕ್ತಾದಿಗಳ ಹಾಗೂ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿ ಪ್ರವಾಸಿಗರನ್ನು ಒಂದು ವಾರಗಳ ಕಾಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಡಿಸಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.ಮಾ.15 ಬೆಳಿಗ್ಗೆ 6 ರಿಂದ ಮಾ.22ರ ಬೆಳಗ್ಗೆ 6ರವರೆಗೆ ಒಂದು ವಾರಗಳ ಕಾಲ ಹಂಪಿಯಲ್ಲಿ ಯಾವುದೇ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಸ್ಥಳೀಯರು ಹೋಗಲು ಅವಕಾಶವಿದೆ. ಪೂಜೆ, ಪುನಸ್ಕಾರಗಳಿಗೆ ನಿರ್ಬಂಧ ಹೇರಿಲ್ಲ. ಇದರ ಹೊರತಾಗಿ ಹಂಪಿಯ ಉಳಿದ ಸ್ಮಾರಕ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮಡಿಕೇರಿಯ ಜಿಲ್ಲೆಯಲ್ಲೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ ಜಿಲ್ಲೆಯ ರಾಜಸೀಟು, ಅಬ್ಬಿ ಜಲಪಾತ, ಮಾಂದಲಪಟ್ಟಿ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಒಂದು ವಾರಗಳ ಕಾಲ ಮುಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೂ ದೇಶ - ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಿದ್ದು, ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದೇವಾಲಯಕ್ಕೆ ಭೇಟಿ ಭಕ್ತಾದಿಗಳು ತಮ್ಮ ಪ್ರವಾಸವನ್ನು ಒಂದು ವಾರಗಳ ಕಾಲ ಮುಂದೂಡಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.