ಬೆಂಗಳೂರು , ಮಾ.14 (DaijiworldNews/PY) : "ಕೆಪಿಸಿಸಿಗೆ ನೂತನವಾಗಿ ಡಿಕೆ ಶಿವಕುಮಾರ್ ಅವರು ನೇಮಕವಾಗಿದ್ದಾರೆ. ಅವರು ಬಯಸಿದ ಟೀಮ್ ಕೂಡಾ ಡಿಕೆಶಿ ಅವರ ಜೊತೆಯಲ್ಲಿ ಬಂದಿದೆ. ಯಂಗ್ಸ್ಟರ್ಸ್ ಎಲ್ಲಾ ಈ ಟೀಮ್ನಲ್ಲಿದ್ದಾರೆ. ಪಕ್ಷದ ಬಲಸಂವರ್ಧನೆ ಡಿಕೆಶಿ ಅವರು ಮಾಡುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಇರುವ ಮಲ್ಲಿಕಾರ್ಜುನ ಖರ್ಗೆಯವರ ನಿವಾಸಕ್ಕೆ ಶನಿವಾರ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ದರು. ಡಿಕೆಶಿ ಅವರು ಖರ್ಗೆ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ, ಆಶೀರ್ವಾದ ಪಡೆದರು. ಡಿಕೆಶಿ ಅವರ ಕೈ ಬಲಪಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಸಂದೇಶ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, "ಕೆಪಿಸಿಸಿಗೆ ಹೊಸದಾಗಿ ಡಿಕೆ ಶಿವಕುಮಾರ್ ಅವರು ನೇಮಕವಾಗಿದ್ದಾರೆ. ಅವರು ಬಯಸಿದ ಟೀಮ್ ಕೂಡಾ ಡಿಕೆಶಿ ಅವರ ಜೊತೆಯಲ್ಲಿ ಬಂದಿದೆ. ಯಂಗ್ಸ್ಟರ್ಸ್ ಎಲ್ಲಾ ಈ ಟೀಮ್ನಲ್ಲಿದ್ದಾರೆ. ಪಕ್ಷದ ಬಲಸಂವರ್ಧನೆ ಡಿಕೆಶಿ ಅವರು ಮಾಡುತ್ತಾರೆ ಎನ್ನುವ ನಂಬಿಕೆ ಇದೆ" ಎಂದರು.
ಪಕ್ಷ ಬಲಪಡಿಸಲು ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗಲ್ಲ. ಡಿಕೆಶಿಗೆ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ನೀಡಬೇಕು. ಡಿಕೆಶಿಗೆ ಎಲ್ಲರೂ ಬೆಂಬಲಿಸಿದರೆ ಮಾತ್ರ ಕೆಲಸ ಮಾಡಲು ಸಾಧ್ಯ. ವ್ಯಕ್ತಿ ಎಷ್ಟೇ ಸಮರ್ಥವಾಗಿದ್ದರೂ ಬೇರೆಯವರ ಬೆಂಬಲ ಅಗತ್ಯ. ಎಲ್ಲರೂ ಸೇರಿ ಡಿಕೆಶಿ ಅವರನ್ನು ಬಲಪಡಿಸಲಿ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಡಿಕೆಶಿ ಅವರು, "ಎಲ್ಲರನ್ನೂ ನಾನು ಒಟ್ಟಿಗೆ ಕರೆದೊಯ್ಯುವ ಕಾರ್ಯ ಮಾಡುತ್ತೇನೆ. ಪಕ್ಷಕಟ್ಟಲು ನನಗೆ ಎಲ್ಲರೂ ಜೊತೆಯಲ್ಲಿದ್ದರೆ ಮಾತ್ರ ಸಾಧ್ಯ. ಹಿರಿಯರು, ಕಿರಿಯರು, ಯುವಕರು, ಮಹಿಳೆಯರು ಎಲ್ಲರೂ ಭಾಗವಹಿಸಬೇಕು. ನಮ್ಮ ಪಕ್ಷ ಸಶಕ್ತವಾಗಿರಲು ಇವರೆಲ್ಲರಿದ್ದರೆ ಮಾತ್ರ ಸಾಧ್ಯ" ಎಂದು ತಿಳಿಸಿದರು.
ದೆಹಲಿಗೆ ಹೋಗುವ ಬಗ್ಗೆ ಮಾತನಾಡಿದ ಅವರು, "ನಾನೊಬ್ಬನೇ ದೆಹಲಿಗೆ ಹೋಗುವುದಿಲ್ಲ. ನಮ್ಮ ಎಲ್ಲಾ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ವಿಚಾರವಾಗಿ ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸುವುದಾಗಿ" ಹೇಳಿದರು.