ನವದೆಹಲಿ, ಮಾ.14 (DaijiworldNews/PY) : ಮೊಬೈಲ್ ಫೋನ್ಗಳು ಹಾಗೂ ನಿರ್ದಿಷ್ಟ ಬಿಡಿಭಾಗಗಳ ಮೇಲಿನ ಜಿಎಸ್ಟಿ ಶೇ.18ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶೇ.6ರಷ್ಟು ಜಿಎಸ್ಟಿ ಏರಿಕೆಯಾಗುವುದರಿಂದ ಮೊಬೈಲ್ ಫೋನ್ಗಳ ಬೆಲೆ ಹೆಚ್ಚಳವಾಗಲಿದೆ.
ಯಂತ್ರಗಳಿಂದ ಸಿದ್ಧಪಡಿಸಿದ ಹಾಗೂ ಕೈಗಳಿಂದ ತಯಾರಿಸಿದ ಬೆಂಕಿ ಪೊಟ್ಟಣಗಳಿಗೆ ಏಕರೂಪದ ತೆರಿಗೆ ಇರಲಿದ್ದು, ಶೇ.12 ಜಿಎಸ್ಟಿ ನಿಗದಿಯಾಗಿದೆ. ಶೇ.18ರಿಂದ ಶೇ.5ಕ್ಕೆ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲಿಸುವ (ಎಂಆರ್ಒ) ಸೇವೆಗಳ ಮೇಲಿನ ತೆರಿಗೆಯನ್ನು ಇಳಿಸಲು ತೀರ್ಮಾನಿಸಲಾಗಿದೆ.
ಶನಿವಾರ ನವದೆಹಲಿಯಲ್ಲಿ ನಡೆದ 39ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
2018–19ನೇ ಹಣಕಾಸು ವರ್ಷದಲ್ಲಿ 5 ಕೋಟಿಗಿಂತಲೂ ಕಡಿಮೆ ವಹಿವಾಟು ಹೊಂದಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ತೆರಿಗೆದಾರರಿಗೆ ಜಿಎಸ್ಟಿಆರ್ 9ಸಿ ರೂಪದಲ್ಲಿ ಹೊಂದಾಣಿಕೆ ಮಾಡಿದ ಲೆಕ್ಕ ಪಟ್ಟಿ ಸಲ್ಲಿಕೆಗೆ ಸಡಿಲಿಕೆ ನೀಡಲಾಗಿದೆ. 2020ರ ಜೂನ್ 30ರ ವರೆಗೂ ವಾರ್ಷಿಕ ರಿಟರ್ನ್ಸ್ ಸಲ್ಲಿಕೆ ಮತ್ತು ಲೆಕ್ಕ ಪಟ್ಟಿ ಸಲ್ಲಿಕೆಗೆ ಅವಧಿ ವಿಸ್ತರಿಸಲಾಗಿದೆ.
ಇದೇ ವರ್ಷ ಜುಲೈ ವೇಳೆಗೆ ಜಿಎಸ್ಟಿ ಜಾಲತಾಣದ ತಾಂತ್ರಿಕ ದೋಷಗಳನ್ನು ಪರಿಹರಿಸುವುದು, ಸಾಮರ್ಥ್ಯ ವೃದ್ಧಿ, ಸಿಬ್ಬಂದಿಯಿಂದ ಉತ್ತಮ ಸ್ಪಂದನೆ, ಪರಿಹಾರ ಚುರುಕುಗೊಳಿಸುವುದರ ನಂದನ್ ನಿಲೇಕಣಿ ನೀಡಿರುವ ಪ್ರಸ್ತಾಪಗಳನ್ನು ಅನುಷ್ಠಾನಗೊಳಿಸಲು ಜಿಎಸ್ಟಿ ಮಂಡಳಿ ನಿರ್ಧರಿಸಿದೆ. ಅನುಷ್ಠಾನದ ಅವಧಿ 2021ರ ಜನವರಿಗೆ ನಿಗದಿಗೊಳಿಸಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಟ್ಟು 2 ಕೋಟಿಗಿಂತ ಕಡಿಮೆ ವಹಿವಾಟು ಮೌಲ್ಯ ಹೊಂದಿರುವ ಕೈಗಾರಿಕೆಗಳ 2017-18 ಹಾಗೂ 2018-19ರ ಲೆಕ್ಕ ಪಟ್ಟಿ ಸಲ್ಲಿಸಲು ವಿಳಂಬ ಮಾಡಿರುವುದಕ್ಕೆ ವಿಳಂಬ ಶುಲ್ಕ ವಿಧಿಸದಿರಲು ತೀರ್ಮಾನಿಸಿದೆ.