ಶ್ರೀನಗರ, ಮಾ.14 (DaijiworldNews/PY) : "ಸರ್ಕಾರ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರವನ್ನು ರಾಜ್ಯವೆಂದು ಮತ್ತೆ ಘೋಷಿಸಬೇಕು" ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸ್ಥಾನಮಾನ ಹೊಂದಿದ್ದ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದು ರಾಜ್ಯದ ಜನತೆಗೆ ಮಾಡಿದ ಅಪಮಾನ" ಎಂದರು.
"ನನಗೆ ಯಾವ ಬಗ್ಗೆ ನೀವು ತೊಂದರೆ ಅನುಭವಿಸಿದ್ದೀರಿ ಎಂದು ಗೊತ್ತಿದೆ. ಸರ್ಕಾರ ಅಬ್ದುಲ್ಲಾ ಅವರ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಅವರನ್ನು ಗೃಹಬಂಧನದಲ್ಲಿರಿಸಿದ್ದು ಅತಿ ಎನಿಸುವ ತೀರ್ಮಾನವಾಗಿತ್ತು" ಎಂದು ತಿಳಿಸಿದರು.
"ಫಾರೂಕ್ ಅವರ ಬಿಡುಗಡೆಯ ನಂತರವೂ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದು ಯಾಕೆಂಬುದು ತಿಳಿದಿಲ್ಲ. ರಾಷ್ಟ್ರವಿರೋಧಿ ಕೃತ್ಯದಲ್ಲಿ ತೊಡಗಿರುವವರನ್ನು ಹಾಗೂ ಕಾನೂನು ಉಲ್ಲಂಘಿಸುವವರನ್ನು ಬಂಧನದಲ್ಲಿಡುವುದು ಸರಿ. ಆದರೆ, ಎಲ್ಲಾ ನಾಯಕರನ್ನು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಪಕ್ಷಾತೀತವಾಗಿ ಬಂಧನದಲ್ಲಿ ಇಟ್ಟಿದ್ದು ಸರಿಯಲ್ಲ" ಎಂದರು.
"ಜಮ್ಮು-ಕಾಶ್ಮೀರ ಪ್ರಗತಿ ಸಾಧಿಸಬೇಕಾದರೆ ಬಂಧನದಲ್ಲಿರುವ ಎಲ್ಲಾ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಬೇಕು. ರಾಜಕೀಯ ಚಟುವಟಿಕೆಗಳು ಕಣಿವೆ ಪ್ರದೇಶದಲ್ಲಿ ಆರಂಭವಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಚುನಾವಣೆಗಳನ್ನು ಸರಿಯಾದ ಕಾರ್ಯವಿಧಾನ ಅನುಸರಿಸಿ ನಡೆಸಬೇಕು" ಎಂದು ತಿಳಿಸಿದರು.
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಗೃಹಬಂಧನದಿಂದ ಬಿಡುಗಡೆಯಾದ ಬಳಿಕ ಶನಿವಾರ ಮೊದಲ ಬಾರಿಗೆ ತಮ್ಮ ಮಗ ಒಮರ್ ಅಬ್ದುಲ್ಲಾ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಒಮರ್ ಅವರ ಹರಿನಿವಾಸಕ್ಕೆ ಭೇಟಿ ನೀಡಿದ ಫಾರೂಕ್ ಅಬ್ದುಲ್ಲಾ ಅವರು, ಮಗನೊಂದಿಗೆ ಒಂದು ಗಂಟೆಯವರೆಗೆ ಕಾಲ ಕಳೆದರು.
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿ ಇರಿಸಲಾಗಿರುವ ಒಮರ್ ಅವರ ಭೇಟಿಗೆ ಅವಕಾಶ ನೀಡುವಂತೆ ಜಮ್ಮು-ಕಾಶ್ಮೀರದ ಆಡಳಿತಕ್ಕೆ ಫಾರೂಕ್ ಅಬ್ದುಲ್ಲಾ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಆಡಳಿತವು ಭೇಟಿಗೆ ಅವಕಾಶ ನೀಡಿತ್ತು.