ನವದೆಹಲಿ, ಮಾ.14 (DaijiworldNews/PY) : ಕೇಂದ್ರ ಸರ್ಕಾರವು ದೇಶದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನಾ ವೈರಸ್ ಅನ್ನು ಅಧಿಸೂಚಿತ ವಿಪತ್ತು ಎಂದು ಘೋಷಿಸಿದ್ದು, ಕೊರೊನಾ ಸೋಂಕು ಪೀಡಿತ ವ್ಯಕ್ತಿಗಳಿಗೆ ಹಾಗೂ ಸೋಂಕಿನಿಂದಾಗಿ ಮೃತಪಟ್ಟ ಕುಟುಂಬಗಳಿಗೆ ನೆರವು ಹಾಗೂ ಪರಿಹಾರವನ್ನು ಒದಗಿಸುವ ವಿಶೇಷ ಒಂದು ಬಾರಿಯ ವ್ಯವಸ್ಥೆ ಆಗಿದೆ ಎಂದು ತಿಳಿಸಿದೆ.
4 ಲಕ್ಷ.ರೂ ಪರಿಹಾರವನ್ನು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ನೀಡಲಾಗುವುದು. ರಾಜ್ಯ ಸರ್ಕಾರಗಳು ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕು ಪೀಡಿತರ ಆಸ್ಪತ್ರೆಯ ವೆಚ್ಚವನ್ನು ನಿಗದಿಗೊಳಿಸಿವೆ ಎಂದು ತನ್ನ ಪತ್ರದಲ್ಲಿ ಗೃಹಸಚಿವಾಲಯ ತಿಳಿಸಿದೆ.
ಜನರಿಗೆ ತಾತ್ಕಾಲಿಕ ಮತ್ತು ಪ್ರತ್ಯೇಕ ನಿಗಾ ಶಿಬಿರಗಳಲ್ಲಿರುವ ರೋಗಿಗಳು ಮತ್ತು ಬಟ್ಟೆ, ನೀರು, ಆಹಾರ, ವೈದ್ಯಕೀಯ ನೆರವು ನೀಡುವುದು ಸರ್ಕಾರ ವಿವರಿಸಿರುವ ಕ್ರಮಗಳಲ್ಲಿ ಒಳಗೊಂಡಿವೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ, ಆರೋಗ್ಯ ರಕ್ಷಣೆ, ಹೆಚ್ಚುವರಿ ಪರೀಕ್ಷಾ ಕೇಂದ್ರಗಳು, ಪೊಲೀಸರು ಹಾಗೂ ಮುನ್ಸಿಪಲ್ ಅಧಿಕಾರಿಗಳಿಗೆ ರಕ್ಷಣಾ ಉಪಕರಣಗಳು, ಸರಕಾರಿ ಆಸ್ಪತ್ರೆಗಳಿಗೆ ಥರ್ಮಲ್ ಸ್ಕಾನರ್ಗಳು ಹಾಗೂ ಇತರ ಅಗತ್ಯ ಉಪಕರಣಗಳ ವೆಚ್ಚವನ್ನು ಪಾವತಿಸಲು ಹಣವನ್ನು ಉಪಯೋಗಿಸಿಕೊಳ್ಳಲಾಗುವುದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಇದಕ್ಕಾಗಿ ಉಪಯೋಗಿಸಲಾಗುವುದಿಲ್ಲ. ನಿಧಿಯ ವಾರ್ಷಿಕ ಹಂಚಿಕೆಯ ಶೇ.10ನ್ನು ಉಪಕರಣಗಳ ಒಟ್ಟು ವೆಚ್ಚ ಮೀರುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.
80ಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ಇದುವರೆಗೆ ಭಾರತದಲ್ಲಿ ದೃಢಪಟ್ಟಿವೆ. ಕೊರೊನಾ ಸೋಂಕಿಗೆ ಒಳಗಾದ ಕರ್ನಾಟಕದ ಕಲಬುರ್ಗಿಯ ವೃದ್ದರೊಬ್ಬರು ಗುರುವಾರ ಹಾಗೂ ಶುಕ್ರವಾರ ರಾತ್ರಿ ದೆಹಲಿಯ ವೃದ್ದೆಯೋರ್ವರು ಸಾವನ್ನಪ್ಪಿದ್ದಾರೆ.
ಈಗಾಗಲೆ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತೆ ಕೈಗೊಂಡು, ಮಹಾರಾಷ್ಟ್ರ, ಕೇರಳ, ಕರ್ನಾಟಕ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ್ ಸ್ಥಳಗಳು, ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅಲ್ಲದೇ, ಸಮಾವೇಶಗಳನ್ನು ರದ್ದುಪಡಿಸಲಾಗಿದೆ. ಪಶ್ಚಿಮ ಬಂಗಾಳ ಹಾಗೂ ಗೋವಾ ರಾಜ್ಯಗಳೂ ಕೂಡಾ ಶನಿವಾರ ಇಂತಂಹ ಕ್ರಮಗಳನ್ನು ಕೈಗೊಂಡಿದೆ.